ADVERTISEMENT

ಬರಗಾಲದ ಬವಣೆಯಲ್ಲಿ ಅದ್ದೂರಿ ಉತ್ಸವ!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:30 IST
Last Updated 13 ಫೆಬ್ರುವರಿ 2012, 5:30 IST
ಬರಗಾಲದ ಬವಣೆಯಲ್ಲಿ ಅದ್ದೂರಿ ಉತ್ಸವ!
ಬರಗಾಲದ ಬವಣೆಯಲ್ಲಿ ಅದ್ದೂರಿ ಉತ್ಸವ!   

ಹಾವೇರಿ: ಇಡೀ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿದೆ. ಸರ್ಕಾರ ಅನುಮತಿ ನೀಡಿದ್ದರಿಂದ ಉತ್ಸವ ಆಯೋಜಿಸಲಾಗುತ್ತದೆ. ಅದ್ದೂರಿ ಉತ್ಸವ ಆಚರಿಸದೇ ಸರಳ ರೀತಿಯ ಉತ್ಸವ ಆಚರಿಸಲಾಗುವುದು ಎಂದು ಹೇಳಿದ್ದ ಜಿಲ್ಲಾಡಳಿತವು ಸರ್ಕಾರ ಬಿಡುಗಡೆ ಮಾಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಕೇವಲ ಕಲಾವಿದರಿಗೆ ಸಂಭಾವನೆ ನೀಡಿದೆ ಎಂದರೆ ನಂಬುತ್ತೀರಾ?

ನಂಬಲೇಬೇಕು. ಏಕೆಂದರೆ, ಸರ್ಕಾರ ಜಿಲ್ಲಾ ಉತ್ಸವ ನಡೆಸಲು 20 ಲಕ್ಷ ರೂ. ಬಿಡುಗಡೆ ಮಾಡಿದೆ. ಜಿಲ್ಲಾಡಳಿತ ಕೇವಲ ಕಲಾವಿದರಿಗಾಗಿಯೇ 22 ಲಕ್ಷ ರೂ. ಸಂಭಾವನೆ ನೀಡುವ ಮೂಲಕ ಧಾರಾಳತನ ಪ್ರದರ್ಶಿಸಿದೆ.

ಬರಗಾಲ ಪರಿಸ್ಥಿತಿ ತಲೆ ದೋರಿದ ಸಂದರ್ಭದಲ್ಲಿ ಐದನೇ ಜಿಲ್ಲಾ ಉತ್ಸವ ಆಚರಿಸುವ ಬಗ್ಗೆ ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸುವುದಾಗಿ ಹೇಳಿದ ಜಿಲ್ಲಾಡಳಿತ, ಕಾರ್ಯರೂಪಗೊಳಿಸುವಲ್ಲಿ ಅದ್ದೂರಿತನ ಮೆರೆದಿರುವುದಕ್ಕೆ ಉತ್ಸವ ವಿರೋಧಿಸುವ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ.

ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ವಿರೋಧದ ನಡುವೆಯೇ ಜಿಲ್ಲಾ ಉತ್ಸವ ನಡೆಸಲು ಮುಂದಾದ ಸ್ಥಳೀಯ ಶಾಸಕರು, ಸರ್ಕಾರದಿಂದ 20 ಲಕ್ಷ ರೂ. ಬಿಡುಗಡೆ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದರು. ಇದರೊಂದಿಗೆ ಕಳೆದ ವರ್ಷದ ಜಿಲ್ಲಾ ಉತ್ಸವದಲ್ಲಿ ಖರ್ಚಾಗದೇ ಉಳಿದ 10.60 ಲಕ್ಷ ರೂ. ಸೇರಿದಂತೆ ಒಟ್ಟು 30.60 ಲಕ್ಷ ರೂ. ಜಿಲ್ಲಾ ಉತ್ಸವ ಆಚರಣೆಗೆ ದೊರೆತಂತಾಗಿದೆ. 

ಆದರೆ, ಕಲಾವಿದರಿಗೆ ಸಂಭಾವನೆ ನೀಡಲಾದ ಹಣ ಗಮನಿಸಿದರೆ, ಸರ್ಕಾರ ನೀಡಿದ 20 ಲಕ್ಷ ರೂ. ಯಾವುದಕ್ಕೂ ಸಾಕಾಗಿಲ್ಲ. ಅಷ್ಟೊಂದು ಧಾರಾಳವಾಗಿ ಕಲಾವಿದರಿಗೆ ಸಂಭಾವನೆ ಕೊಡ ಮಾಡಿದೆ.
ಶನಿವಾರ ಚಿತ್ರಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ ಅವರಿಗೆ 1.5 ಲಕ್ಷ ರೂ. ಸಂಭಾವನೆ ನೀಡಿದ್ದರೆ,

ಸಂಗೀತ ನಿರ್ದೇಶಕ ಗುರುಕಿರಣ ಹಾಗೂ ತಂಡಕ್ಕೆ  8 ಲಕ್ಷ ರೂ. ನೀಡಲಾಗಿದೆ. ಕೊಲ್ಲಾಪುರದ ಜಾಗೋ ಹಿಂದುಸ್ಥಾನಿ ತಂಡಕ್ಕೆ 50 ಸಾವಿರ ರೂ., ಸ್ಥಳೀಯ ಕಲಾವಿದರು, ನಾಟಕೋತ್ಸವ, ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡ ಕಲಾವಿದರಿಗೆ ಸೇರಿದಂತೆ ಒಟ್ಟು 22 ಲಕ್ಷ ರೂ.ಗೂ ಮಿಕ್ಕಿ ಸಂಭಾವನೆ ನೀಡಲಾಗುತ್ತಿದೆ ಎಂದು ಉತ್ಸವದ ಉಸ್ತುವಾರಿ ಹೊತ್ತ ಅಧಿಕಾರಿಗಳೊಬ್ಬರು ತಿಳಿಸಿದರು.

ವೇದಿಕೆ ನಿರ್ಮಾಣಕ್ಕೂ ಲಕ್ಷಗಟ್ಟಲೇ ಹಣ ಖರ್ಚು ಮಾಡಲಾಗಿದೆ. ಮುಖ್ಯ ವೇದಿಕೆ, ಲೈಟಿಂಗ್, ನಾಟಕೋತ್ಸವದ ವೇದಿಕೆ, ಮಳಿಗೆಗಳು ಸೇರಿದಂತೆ ಇತರ ವೇದಿಕೆಗಳ ನಿರ್ಮಾಣಕ್ಕೆ ಅಂದಾಜು 8 ಲಕ್ಷ ರೂ.ಗಳಿಗೂ ಮಿಕ್ಕ ಹಣ ವಿನಿಯೋಗಿಸಲಾಗಿದೆ ಎಂದು ತಹಶೀಲ್ದಾರ ರಾಜಶೇಖರ ಡಂಬಳ ತಿಳಿಸುತ್ತಾರೆ.

ಸರಳತೆ ಯಾವುದು?: ಜಿಲ್ಲಾಡಳಿತ ತಿಳಿಸಿದ ಸರಳ ಉತ್ಸವ ಎಂದರೆ ಇದೇನಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಸರಳ ಉತ್ಸವವೇ ಈ ರೀತಿ ಇದ್ದರೆ, ಅದ್ದೂರಿ ಉತ್ಸವ ಇನ್ಯಾವ ರೀತಿ ಇರುತ್ತದೆ? ಎಂಬುದನ್ನು ಜಿಲ್ಲಾಡಳಿತವೇ ಸ್ಪಷ್ಟಪಡಿಸಬೇಕು. ಏಕೆಂದರೆ, ಬರದ ಬವಣೆಯಲ್ಲಿ ತೊಂದರೆಗೊಳಗಾದ ಯಾವ ಪ್ರದೇಶದಲ್ಲಿಯೂ ಬರ ಪರಿಹಾರ ಕಾಮಗಾರಿಗಳು ಶುರುವಾಗಿಲ್ಲ. ಈ ಸಂದರ್ಭದಲ್ಲಿ ಸುಮಾರು ಅರ್ಧ ಕೋಟಿಯಷ್ಟು ಹಣವನ್ನು ಖರ್ಚು ಮಾಡುವ ಅಗತ್ಯ ಇತ್ತಾ? ಎಂಬ ಪ್ರಶ್ನೆಯನ್ನು ರೈತ ಸಂಘದ ಪದಾಧಿಕಾರಿಗಳ ಪ್ರಶ್ನೆಯಾಗಿದೆ.

ಲಕ್ಷಾಂತರ ರೂ.ಗಳ ಸಂಭಾವನೆ ನೀಡಿ ಸಿನಿಮಾ ಹಾಡುಗಳನ್ನು ಹಾಡುವವರನ್ನು ಕರೆಸುವುದಕ್ಕಿಂತ ಜಿಲ್ಲೆಯಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹಾಗೂ ರಾಜ್ಯೋತ್ಸವ, ಕಲಾ, ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದರಿದ್ದಾರೆ. ಉದಾಹರಣೆಗೆ ಇತ್ತೀಚೆಗಷ್ಟೇ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ರಾಣೆಬೆನ್ನೂರ ತಾಲ್ಲೂಕಿನ ಅಂತರವಳ್ಳಿಯ ರಾಮನಗೌಡ, ಜ್ಯೂ.ರಾಜಕುಮಾರ (ಅಶೋಕ ಬಸ್ತಿ) ಅಂತಹ ಕಲಾವಿದರನ್ನು ಆಹ್ವಾನಿಸಿಲ್ಲ.

ಇಂತಹ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೀಡಿಸಿದ್ದರೆ, ಲಕ್ಷಾಂತರ ರೂ. ಅನಗತ್ಯ ಖರ್ಚು ಮಾಡುವುದು ತಪ್ಪುತ್ತಿತ್ತು ಎನ್ನುತ್ತಾರೆ ರೈತ ಮುಖಂಡ ರವೀಂದ್ರಗೌಡ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.