ADVERTISEMENT

ಬಿಲ್ ಪಾವತಿಗೆ ಯಂತ್ರವಿಲ್ಲ, ಸಿಬ್ಬಂದಿಯೇ ಎಲ್ಲ!

ನಗರ ಸಂಚಾರ

ವಿಜಯ್ ಹೂಗಾರ
Published 2 ಸೆಪ್ಟೆಂಬರ್ 2013, 6:39 IST
Last Updated 2 ಸೆಪ್ಟೆಂಬರ್ 2013, 6:39 IST

ಹಾವೇರಿ: ವಿದ್ಯುತ್ ಬಿಲ್ ಪಾವತಿಸದಿದ್ದರೆ, ವಿದ್ಯುತ್ ಸಂಪರ್ಕ (ಲೈನ್) ಕಡಿತ ಮಾಡಲಾಗುತ್ತದೆ. ಬಿಲ್ ಪಾವತಿಸಲು ಹೋದರೆ, ಕೌಂಟರ್ ಬಳಿ ದೊಡ್ಡ ಸರದಿ (ಲೈನ್) ಇರುತ್ತದೆ...!

ಇದು ಹಾವೇರಿ ನಗರದ ಪ್ರತಿಯೊಬ್ಬ ವಿದ್ಯುತ್ ಬಳಕೆದಾರ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವಾಗ ಎದುರಾಗುವ ತೊಂದರೆಯಿಂದ ಗೊಣಗಾಡುವ ಮಾತಿದು.

ಜಿಲ್ಲಾ ಕೇಂದ್ರವಾದ ಹಾವೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಗೆ ಕೆಲ ಪ್ರದೇಶಗಳಲ್ಲಿ ಬಿಲ್ ಸ್ವೀಕರಿಸುವ ಕೌಂಟರ್‌ಗಳನ್ನು ಮಾಡಿದರೂ, ಅವು ನಿಗದಿತ ದಿನದಂದು ಕೆಲಸ ಮಾಡುತ್ತವೆ. ಸಮಯದ ಅಭಾವದಿಂದಲೋ ಏನೋ ಜನರು ಹೆಚ್ಚಾಗಿ ತಮ್ಮ ಪ್ರದೇಶದಲ್ಲಿ ಬಿಲ್ ಪಾವತಿಸುತ್ತಿಲ್ಲ. ಬಹಳಷ್ಟು ಜನರು ಹೆಸ್ಕಾಂ ಮುಖ್ಯ ಕಚೇರಿಯಲ್ಲಿರುವ ಬಿಲ್ ಸ್ವೀಕರಿಸುವ ಕೇಂದ್ರಕ್ಕೆ ಬರುತ್ತಾರೆ.

ನಗರದ ಜನರು ಬಿಲ್ ಪಾವತಿಸಲು ಹೆಸ್ಕಾಂ ಕಚೇರಿಗೆ ಹೆಚ್ಚು ಬರುವುದರಿಂದ ಬಿಲ್ ಪಾವತಿಸುವ ಕೇಂದ್ರ ಯಾವಾಗಲೂ ಜನಜಂಗುಳಿಯಿಂದಲೇ ಕೂಡಿರುತ್ತದೆ. ಒಂದು ಬಿಲ್ ಪಾವತಿಸಬೇಕಾದರೆ, ಕನಿಷ್ಠ ಅರ್ಧಗಂಟೆಯಿಂದ ಮುಕ್ಕಾಲು ಗಂಟೆ ಬೇಕಾಗುತ್ತದೆ.
ಜನರಿಗೆ ಆಗುತ್ತಿರುವ ತೊಂದರೆ ನಿವಾರಣೆ ಮಾಡುವ ಸಲುವಾಗಿ ಒಂದು ಕಡೆ ಸಿಬ್ಬಂದಿ ಮೂಲಕ ಬಿಲ್ ಸ್ವೀಕರಿಸುವ ಕೌಂಟರ್, ಇನ್ನೊಂದಡೆ ಎಟಿಬಿಪಿ (ಎನಿ ಟೈಮ್ ಬಿಲ್ ಪೆಮೆಂಟ್) ಯಂತ್ರದ ಮೂಲಕ ವಿದ್ಯಿತ್ ಬಿಲ್ ಕೌಂಟರ್ ಪಾವತಿ ಸ್ಥಾಪಿಸಿದೆ.

ಎಟಿಬಿಪಿ ಯಂತ್ರದಲ್ಲಿ ಗ್ರಾಹಕರು ತಮ್ಮ ಬಿಲ್ಲಿನ ಆರ್‌ಆರ್ ಸಂಖ್ಯೆ ಹಾಗೂ ದುಡ್ಡನ್ನು ಹಾಕಿದರೆ, ಯಂತ್ರವು ಹಣ ಸ್ವೀಕರಿಸಿ ಕ್ಷಣಾರ್ಧದಲ್ಲಿ ಗ್ರಾಹಕರಿಗೆ ರಸೀದಿ ನೀಡುತ್ತಿತ್ತು, ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿತ್ತು. ಹೀಗಾಗಿ ಜನರಿಗೆ ಬಿಲ್ ಪಾವತಿಸುವುದು ಅಂತಹ ಸಮಸ್ಯೆ ಎನಿಸಿರಲಿಲ್ಲ.

ಆದರೆ, ಕಳೆದ ಕೆಲವು ತಿಂಗಳುಗಳಿಂದ ನಗರದ ಹೆಸ್ಕಾಂ ಕಚೇರಿಯಲ್ಲಿರುವ ವಿದ್ಯುತ್ ಬಿಲ್ ಸ್ವೀಕರಿಸುವ ಎಟಿಬಿಪಿ ಯಂತ್ರವು ತಾಂತ್ರಿಕ ಕಾರಣದಿಂದ ಸ್ವಯಂ ಕಾರ್ಯ ನಿರ್ವಹಣೆ ಸ್ಥಗಿತಗೊಳಿಸಿದೆ.

ಇದರಿಂದ ಗ್ರಾಹಕರು ಹೆಸ್ಕಾಂ ಕಚೇರಿಯಲ್ಲಿರುವ ಒಂದೇ ಕೌಂಟರನಲ್ಲಿ ಬಿಲ್ ಪಾವತಿಸಲು ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಬಿಲ್ ಪಾವತಿಸಲು ಗ್ರಾಹಕರು ಪಡುತ್ತಿರುವ ಕಷ್ಟ ಕಂಡು ಹೆಸ್ಕಾಂ ಅಧಿಕಾರಿಗಳು ಆ ಯಂತ್ರವನ್ನು ದುರಸ್ತಿಗೊಳಿಸಿದರೂ ಮತ್ತೆ ಕೆಲವೇ ದಿನಗಳಲ್ಲಿ ಕೆಟ್ಟು ನಿಂತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಯಂತ್ರವನ್ನು ಸಾರ್ವಜನಿಕರಿಗೆ ಮುಕ್ತವಾಗಿ ಇಡದೇ, ಅಲ್ಲಿಯೂ ಒಬ್ಬ ಸಿಬ್ಬಂದಿಯನ್ನು ಇಟ್ಟು (ಕಚೇರಿ ಸಮಯದಲ್ಲಿ ಮಾತ್ರ) ವಿದ್ಯುತ್ ಬಿಲ್ ಸ್ವೀಕರಿಸಲಾಗುತ್ತದೆ. ಹೀಗಾಗಿ ಆ ಯಂತ್ರ ಇದ್ದು ಇಲ್ಲದಂತಾಗಿದೆ ಎಂಬುದು ಗ್ರಾಹಕರ ಆರೋಪ.

ವಿದ್ಯುತ್ ಬಿಲ್ ಪಾವತಿಸಲು ಪ್ರತಿನಿತ್ಯ ದೊಡ್ಡ ಸರದಿ ಇರುತ್ತದೆ. ಕೆಲವೊಂದು ಬಾರಿ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಲು ಸಾಧ್ಯವಾಗದೇ ದಂಡ ಕಟ್ಟಬೇಕಾಗುತ್ತದೆ. ಹಿಂದಿನಂತೆ ಹೆಸ್ಕಾಂ ಆವರಣದಲ್ಲಿ ಇರುವ ಎನಿ ಟೈಮ್ ಬಿಲ್ ಪಾವತಿಸುವ ಯಂತ್ರಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಇಲ್ಲವಾದರೆ, ಹೆಸ್ಕಾಂ ಆವರಣದಲ್ಲಿ ಹೆಚ್ಚುವರಿ ಕೌಂಟರ್ ನಿರ್ಮಿಸಿ ಗ್ರಾಹಕರಿಗೆ ಆಗುವ ತೊಂದರೆಯನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ನಗರದ ನಿವಾಸಿ ಗಿರೀಶ ಬಡಿಗೇರ.

ಸಮರ್ಪಕ ಕಾರ್ಯ ನಿರ್ವಹಿಸದ ಇಂತಹ ಯಂತ್ರಗಳನ್ನು ಅಳವಡಿಸುವ ಬದಲು ದೂರವಾಣಿ ಬಿಲ್ ಪಾವತಿಸುವಂತೆ ಆನ್‌ಲೈನ್ ಬಿಲ್ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಬೇಕು ಎಂದು ಗಿರೀಶ ಸಲಹೆ ಮಾಡುತ್ತಾರೆ.

ಎನಿ ಟೈಮ್ ಬಿಲ್ ಪಾವತಿಸುವ ಯಂತ್ರವನ್ನು ಹಲವು ಬಾರಿ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿದರೂ, ಗ್ರಾಹಕರು ಸರಿಯಾಗಿ ಅಪರೇಟ್ ಮಾಡದ ಕಾರಣ ಪದೇ ಪದೇ ದುರಸ್ತಿಗೆ ಬರುತ್ತಿದೆ. ಅದೇ ಕಾರಣಕ್ಕಾಗಿ ಅಲ್ಲಿ ಒಬ್ಬ ಸಿಬ್ಬಂದಿ ನೇಮಕ ಮಾಡಿ, ಆತನ ಮೂಲಕವೇ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹೇಳುತ್ತಾರೆ ಹೆಸ್ಕಾಂ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.