ADVERTISEMENT

ಬಿಸಿಯೂಟ ತಯಾರಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 8:54 IST
Last Updated 12 ಡಿಸೆಂಬರ್ 2012, 8:54 IST

ಸವಣೂರು: ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸಬೇಕು ಎಂದು  ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘಟನೆಯ ಕಾರ್ಯಕರ್ತರು ಸವಣೂರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ನೇತೃತ್ವದಲ್ಲಿ ಸೋಮವಾರ ನಗರದ ದೊಡ್ಡಹುಣಸೆ ಕಲ್ಮಠದಿಂದ ಆರಂಭಗೊಂಡ ಬಿಸಿಯೂಟದ ಅಡುಗೆ ಸಿಬ್ಬಂದಿ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಂದಾಯ ಇಲಾಖೆ ಆವರಣದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯ ಉದ್ದಕ್ಕೂ ಘೋಷಣೆ ಕೂಗಿದ ಸಂಘಟನೆಯ ಕಾರ್ಯಕರ್ತರು, ತಮ್ಮ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ ಡಾ. ನಾಗೇಂದ್ರ ಹೊನ್ನಳ್ಳಿ ಅವರ ಮೂಲಕ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರಿಗೆ ರವಾನಿಸಿದರು.

ಅಕ್ಷರ ದಾಸೋಹ ಯೋಜನೆಯ ಒಂದು ಲಕ್ಷಕ್ಕೂ ಹೆಚ್ಚು ಬಿಸಿಯೂಟ ತಯಾರಕರು ಕನಿಷ್ಠ ವೇತನದಿಂದ ವಂಚಿತರಾಗಿದ್ದಾರೆ. ಯೋಜನೆಯ ಖಾಸಗಿಕರಣದ ನೆಪದಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದಲೂ ಹತ್ತಾರು ರೀತಿಯ ಕಿರುಕುಳ ಎದುರಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ ಹಾಗೂ ಕೆಲಸದ ಭದ್ರತೆ ಇಲ್ಲದೆ  ಶೋಷಣೆಗೆ ಒಳಗಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಅಡುಗೆ ಸಿಬ್ಬಂದಿ ತಮಿಳುನಾಡು ರಾಜ್ಯದ ಮಾದರಿಯಲ್ಲಿ ಅರೆಕಾಲಿಕ ಕಾಯಂ ಎಂದು ಪರಿಗಣಿಸಿ ಸಾಮಾಜಿಕ ಭದ್ರತೆ ಒದಗಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿಯನ್ನು ಮುಂದೆವರೆಸಬೇಕು. ಕೆಲಸ ಕಳೆದುಕೊಂಡ ಸಿಬ್ಬಂದಿಗಳನ್ನು ಪುನಃನೇಮಿಸಿಕೊಳ್ಳಬೇಕು. ಸಂಭಾವನೆಯನ್ನು ಪರಿಷ್ಕರಿಸಿ ಕನಿಷ್ಠ 6 ಸಾವಿರ ರೂಪಾಯಿ ವೇತನ ನಿಗದಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಬಿಸಿಯೂಟ ತಯಾರಕರಿಗೆ ಆರೋಗ್ಯ ಚಿಕಿತ್ಸೆಗೆ ರೂ 50 ಸಾವಿರ ವೈದ್ಯಕೀಯ ವೆಚ್ಚ ನೀಡಬೇಕು. ಹೆರಿಗೆ ಭತ್ಯೆ ಮತ್ತು ಆರೋಗ್ಯ ವಿಮೆ, ಭವಿಷ್ಯ ನಿಧಿ ಹಾಗೂ ಇಎಸ್‌ಐ ಸೌಲಭ್ಯ ಜಾರಿಗೊಳಿಸಬೇಕು. ಸರ್ಕಾರ ಗುತ್ತಿಗೆ ನೀಡುವುದನ್ನು ಸ್ಥಗಿತಗೊಳಿಸಿ ಯೋಜನೆಯನ್ನು ಮುಂದುವರೆಸಬೇಕು. ಇಸ್ಕಾನ್ ಹಾಗೂ ಅಕ್ಷಯ ಪಾತ್ರೆ ಫೌಂಡೇಷನ್ ಚಟುವಟಿಕೆಗಳ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  ಸಂಘಟನೆಯ ತಾಲ್ಲೂಕು ಸಮಿತಿ ಅಧ್ಯಕ್ಷೆ ಲಲಿತಾಶ್ರಿ ಬುಶೆಟ್ಟಿ, ಕಾರ್ಯದರ್ಶಿ ನೂರ್‌ಅಹ್ಮದ್ ಮೋಮೀನ್, ಸಂಚಾಲಕ ಬಸವರಾಜ ಬಸವನಾಯ್ಕರ್ ಹಾಗೂ ಪದಾಧಿಕಾರಿಗಳಾದ ಪಾರ್ವತಿ ಆಪ್ಟೆ, ಶಕುಂತಲಾ ಸಜ್ಜನ, ಗೌರಮ್ಮ ಹಡಪದ, ಅಕ್ಕಮ್ಮ ಆರಾಧ್ಯಮಠ ಸೇರಿದಂತೆ ಸವಣೂರು ತಾಲ್ಲೂಕಿನ ಬಿಸಿಯೂಟ  ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.