ADVERTISEMENT

ಬ್ಯಾಡಗಿಯಲ್ಲಿ ದಾನಮ್ಮದೇವಿ 2ನೇ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:22 IST
Last Updated 2 ಡಿಸೆಂಬರ್ 2013, 8:22 IST

ಬ್ಯಾಡಗಿ: ಪಟ್ಟಣದ ನೆಹರೂ ನಗರ ಈಗ ಮಹಾರಾಷ್ಟ್ರದ ಗುಡ್ಡಾಪುರವಾಗಿ ಕಂಗೊಳಿ ಸುತ್ತಿದೆ. ಕಳೆದ ವರ್ಷ ದಾನಮ್ಮದೇವಿ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗಿದ್ದು, ಜನತೆ 2ನೇ ವರ್ಷದ ಜಾತ್ರಾ ಮಹೋತ್ಸವದ ಸಂಭ್ರಮ ದಲ್ಲಿದ್ದಾರೆ.

ಬ್ಯಾಡಗಿ–ಮೋಟೆಬೆನ್ನೂರ ರಸ್ತೆಗೆ ಹೊಂದಿ ಕೊಂಡಿರುವ ನೆಹರೂ ನಗರದ ಸೋಮೇಶ್ವದ ದೇವಸ್ಥಾನದ ಪಕ್ಕದಲ್ಲಿರುವ ದಾನಮ್ಮ ದೇವಿ ದೇವಸ್ಥಾನವನ್ನು ಈಗ ಬಗೆ ಬಗೆಯ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಪಟ್ಟಣದಲ್ಲಿ ದಾನಮ್ಮದೇವಿಯ ಭಕ್ತರು ಸಾಕಷ್ಟಿದ್ದು ದೇವ ಸ್ಥಾನ ನಿರ್ಮಿಸುವ ಅವರ ಕನಸು ಈಗ ಸಾಕಾರಗೊಂಡಿದೆ.

ಪಟ್ಟಣದ ಶಶಿಕಲಾ ಪಾಟೀಲ, ಮಹೇಶ್ವರಿ ಪಸಾರದ, ಸುಚಿತ್ರಾ ಎಲಿ, ಅನುರಾಧಾ ಮೋರಿ ಗೇರಿ, ದ್ರಾಕ್ಷಾಯಿಣಿ ಹರಮಗಟ್ಟಿ, ಕೆ.ಶಾರದಾ, ಗಿರಿಜಾ ನಿಡಗುಂದಿ, ಚೆನ್ನಮ್ಮ ಕೋರಿಶೆಟ್ಟರ್‌, ಸವಿತಾ ಶೆಟ್ಟರ, ರತ್ನಮ್ಮ ಶೆಟ್ಟರ್‌, ಕಸ್ತೂರಮ್ಮ ಬಿದರಿ, ರೇಖಾ ಯಕ್ಲಾಸ ಪುರ, ಶರಣಮ್ಮ ಪಾಟೀಲ ಅವರ ನೇತೃತ್ವದಲ್ಲಿ ಸಂಗ್ರಹಿಸಿದ ಹಣದಲ್ಲಿ ಸುಮಾರು ₨ 20ಲಕ್ಷ ವೆಚ್ಚದ ಸುಂದರ ಮಂದಿರವನ್ನು ನಿರ್ಮಿಸಲಾ ಗಿದೆ.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಗಳ  ಸಾನಿಧ್ಯದಲ್ಲಿ ದಾನಮ್ಮದೇವಿಯ ಪುರಾಣ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ದಿನ ನಿತ್ಯ ಸುಮಾರು 2 ಗಂಟೆ ಯವರೆಗೆ ನಡೆಯುವ ಪುರಾಣ ಪ್ರವಚನ ವನ್ನು ವೀಕ್ಷಿಸಲು ಸಾವಿರಾರು ಮಹಿಳೆಯರು ಸೇರುತ್ತಾರೆ.

ಇಳಕಲ್‌ ತಾಲ್ಲೂಕಿನ ಗೂಡೂರಿನ ಅನ್ನದಾ ನೇಶ್ವರ ಹಿರೇಮಠ ಶಾಸ್ತ್ರಿಗಳು ನಡೆಸಿಕೊಡುವ ಪುರಾಣ ಪ್ರವಚನದ ಮಂಗಲೋತ್ಸವ ನಾಳೆ ಅಂತ್ಯಗೊಳ್ಳಲಿದೆ. ಈಗಾಗಲೆ ಬೃಹತ್‌ ರಕ್ತದಾನ ಶಿಬಿರ ನಡೆಸಲಾಗಿದ್ದು ನೂರಾರು ಮಹಿಳೆಯರು ಸ್ವಯಂ ಪ್ರೇರಣೆಯಿಂದ ರಕ್ತ ದಾನ ಮಾಡಿದ್ದಾರೆ.

ಸುಮಾರು 2001 ಮುತೈದೆಯರಿಗೆ ಏಕಕಾಲಕ್ಕೆ ಉಡಿತುಂಬುವ ಕಾರ್ಯಕ್ರಮವನ್ನು ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿಗಳ  ಸಾನಿಧ್ಯದಲ್ಲಿ ನಡೆಸಲಾಯಿತು. ಹಸಿರು ಸೀರೆಯುಟ್ಟು ದೇವಸ್ಥಾನಕ್ಕೆ ಹೊರಡುವ ದೃಶ್ಯ ಮಹಿಳೆಯರ ಉತ್ಸಾಹವನ್ನು ಇಮ್ಮಡಿ ಸಿತ್ತು. ಭಾನುವಾರ ಲೋಕಲ್ಯಾಣಾರ್ಥವಾಗಿ ಗಣಹೋಮ, ರುದ್ರಹೋಮ, ಹಾಗೂ ಗಾಯತ್ರಿ ಹೋಮವನ್ನು ನಡೆಸಲಾಯಿತು. ಇದೇ ಸೋಮವಾರ ಛಟ್ಟಿ ಅಮವಾಸ್ಯೆಯಂದು ದಾನಮ್ಮದೇವಿ ಪುರಾಣ ಮಂಗಲೋತ್ಸವ ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳ ಸಾನಿಧ್ಯ ದಲ್ಲಿ ನಡೆಯಲಿದೆ.

ಬಳಿಕ ಮಹಾಪ್ರಸಾದ, ಸಂಜೆ 4ಕ್ಕೆ ಅಡ್ಡ ಪಲ್ಲಕ್ಕಿಸೇವೆ ರಥೋತ್ಸವ, ಎರಡು ಸಾವಿರ ಪಣತಿಗಳ ಕಾರ್ತಿಕೋತ್ಸವ ಕಾರ್ಯ ಕ್ರಮಗಳು ಜರುಗಲಿವೆ. ಮಹಾಪ್ರಸಾದಕ್ಕೆ ಭಕ್ತರಿಂದ ಅಕ್ಕಿ ಸಂಗ್ರಹಿಸಲಾಗಿದ್ದು ಗೋದಿ ಹುಗ್ಗಿಯ ತಯಾರಿಕೆಗೆ ಸಿದ್ಧತೆ ನಡೆದಿದೆ. ಅಂದು ರಾತ್ರಿ ‘ಶ್ರೇಷ್ಠ ಗಾಯಕಿ ಪ್ರಶಸ್ತಿ’ ಪುರಸ್ಕೃತ ಆಕಾಶವಾಣಿ ಕಲಾವಿದೆ ಸುಜಾತಾ ಗೂರವರ ಸಂಗೀತದ ರಸದೌತನವನ್ನು ದಾನಮ್ಮದೇವಿ ಭಕ್ತರು ಸವಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.