ADVERTISEMENT

ಮಣ್ಣೂರು ಈಗ ಕಾಂಕ್ರೀಟ್ ಊರು..!

ವಿಜಯ್ ಹೂಗಾರ
Published 24 ಫೆಬ್ರುವರಿ 2011, 9:50 IST
Last Updated 24 ಫೆಬ್ರುವರಿ 2011, 9:50 IST

ಹಾವೇರಿ: ಅಂದು ಮಳೆಗಾಲದಲ್ಲಿ ಗ್ರಾಮದೊಳಗೆ ಹೋಗಲು ಸಾಧ್ಯವಾಗದೇ ಊರು ಬಿಟ್ಟು ಹೋಗುತ್ತಿದ್ದ ಜನರು, ಇಂದು ಅದೇ ಮಳೆಗಾಲದಲ್ಲಿ ಗ್ರಾಮದ ಯಾವುದೇ ಭಾಗಕ್ಕೂ ಸಲಿಸಾಗಿ ಓಡಾಡಬಹುದು. ಮಳೆ ಬಂದಾಗ ಮನೆಗಳ ಸೋರಿಕೆ, ರಸ್ತೆಗಳ ಗಿಜಗಿಟ್ಟುವಿಕೆ ಇಂತಹ ಯಾವುದೇ ಸಮಸ್ಯೆಗಳಿಲ್ಲ. ಎಲ್ಲವೂ ಸುವ್ಯವಸ್ಥಿತ. ಊರು ಮಣ್ಣೂರಾದರೂ ಕಾಲಿಗೆ ಮಣ್ಣು ಮಾತ್ರ ಹತ್ತುವುದಿಲ್ಲ...!

ಇದು ನವ ಮಣ್ಣೂರಿನ ಇಂದಿನ ಸ್ಥಿತಿ. ಪ್ರತಿ ಮಳೆಗಾಲದಲ್ಲಿ ವರದಾ ನದಿಯ ಪ್ರವಾಹ ಭೀತಿಯಲ್ಲಿಯೇ ಹಲವು ದಶಕಗಳಿಂದ ಕಾಲ ಕಳೆಯುತ್ತಿದ್ದ ಮಣ್ಣೂರ ಗ್ರಾಮಸ್ಥರ ಸ್ಥಳಾಂತರವಾಗಬೇಕೆಂಬ ಬಹುದಿನಗಳ ಕನಸು ಕೊನೆಗೂ ನನಸಾಗಲಿದೆ. ಪ್ರವಾಹ ಭೀತಿಯ ಬಿಟ್ಟು ನಿರ್ಭೀತಿ ಬದುಕಿಗೆ ಗ್ರಾಮದ ಜನರು ಫೆ. 26 ರಂದು ಕಾಲಿಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂತ್ರಸ್ತರ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ. ಅದು ಸಹಜವಾಗಿ ಗ್ರಾಮಸ್ಥರಲ್ಲಿ ಸಂತಷವನ್ನುಂಟು ಮಾಡಿದೆ.

ನಡುಗಡ್ಡೆ ಊರು: ಕಳೆದ ವರ್ಷ ಎದುರಾದ ಪ್ರವಾಹ ಪರಿಸ್ಥಿತಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವಾರು ಗ್ರಾಮಗಳು ತೀವ್ರ ತೊಂದರೆಗೊಳಗಾದವು. ವರದಾ ನದಿ ದಡದಲ್ಲಿರುವ ಮಣ್ಣೂರು ಗ್ರಾಮ  ಕೇವಲ 150 ಮನೆಗಳ ಪುಟ್ಟ ಗ್ರಾಮ. ಪ್ರವಾಹ ಸಂದರ್ಭದಲ್ಲಿ ಇಲ್ಲಿನ ಗೋಳು ಮಾತ್ರ ಹೇಳತಿರದು. ಮಳೆಗಾಲದಲ್ಲಿ ಊರೊಳಗೆ ನೀರು ನುಗ್ಗಿ ನಡುಗಡ್ಡೆಯಾಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ಗ್ರಾಮದ ಜನ ಮೂರ್ನಾಲ್ಕು ತಿಂಗಳು ಊರು ಬಿಡುವುದು ಅನಿವಾರ್ಯ.

ಒಂದು ಬಾರಿ ಪ್ರವಾಹ ಬಂದಾಗ ಊರಿಗೆ ಬಂದಿದ್ದ ಸಾರಿಗೆ ಸಂಸ್ಥೆ ಬಸ್ಸು ಊರಿಂದ ಆಚೆ ಹೋಗಲು ಸಾಧ್ಯವಾಗದೇ ಮೂರು ದಿನಗಳ ಊರಲ್ಲಿಯೇ ನಿಲ್ಲಬೇಕಾಯಿತು. ಪ್ರತಿ ವರ್ಷ ಮಳೆಗಾಲದಲ್ಲಿ ಗ್ರಾಮದ ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದ ಗ್ರಾಮಸ್ಥರು ಕಳೆದ ವರ್ಷ ತೀವ್ರ ತೆರೆನಾದ ಹೋರಾಟ ಮಾಡಿದ ಪರಿಣಾಮ ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಮಣ್ಣೂರು, ಶಾಖಾರ ಹಾಗೂ ರಾಣೆಬೆನ್ನೂರ ತಾಲ್ಲೂಕಿನ ಮುಷ್ಠೂರು ಗ್ರಾಮಗಳ ಸಂಪೂರ್ಣ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿತು.

ಆಸರೆ ಯೋಜನೆಯಡಿ ಈ ಗ್ರಾಮವನ್ನು ಸ್ಥಳಾಂತರ ಮಾಡಲು ಟಾಟಾ ಕಂಪನಿಯ ಟಾಟಾ ಪರಿಹಾರ ಸಮಿತಿ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿತಲ್ಲದೇ, ಸುಮಾರು ಒಂದುವರೆ ವರ್ಷದಲ್ಲಿ ಸುಸಜ್ಜಿತ ಮನೆಗಳಷ್ಟೇ ಅಲ್ಲದೇ ಇಡೀ ಗ್ರಾಮವನ್ನು ಪುನರ್ ನಿರ್ಮಾಣ ಮಾಡಿದೆ. ಹಳೆಯ ಗ್ರಾಮದಲ್ಲಿದ್ದ 144 ಕುಟುಂಬಗಳಿಗೆ ತಲಾ ಒಂದೊಂದು ಮನೆ ಜತೆಗೆ ಶಾಲೆ, ಉದ್ಯಾನವನ, ಕ್ರೀಡಾಂಗಣ, ಸಮುಧಾಯ ಭವನ ಹೀಗೆ ನವ ಮಣ್ಣೂರ ಗ್ರಾಮವನ್ನೇ ನಿರ್ಮಿಸಲು ಉದ್ದೇಶಿಸಲಾಗಿದೆ.

ಈಗಾಗಲೇ 144 ಮನೆಗಳು, ಶೌಚಾಲಯ, ಕುಡಿಯುವ ನೀರು, ನಿರಂತರ ವಿದ್ಯುತ್, ಕಾಂಕ್ರಿಟ್ ರಸ್ತೆ, ಕ್ರೀಡಾಂಗಣ ಸೇರಿದಂತೆ ಅನೇಕ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮನೆಗಳ ಹಸ್ತಾಂತರ ಮಾಡಿದ ಮೂರ್ನಾಲ್ಕು ತಿಂಗಳಲ್ಲಿ ಸಮುದಾಯ ಭವನ, ಕ್ರೀಡಾಂಗಣ, ಶಾಲೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಟಾಟಾ ಪರಿಹಾರ ಸಮಿತಿಯ ಎನ್.ಕೆ.ಸಿಂಗ್ ಹೇಳುತ್ತಾರೆ.

ನವ ಮಣ್ಣೂರು ಗ್ರಾಮದದಲ್ಲಿ ಇನ್ನು ಮುಂದೆ ಮಣ್ಣಿನ ರಸ್ತೆಗಳು ಕಾಣಸಿಗುವುದಿಲ್ಲ. ಗ್ರಾಮದ ಪ್ರತಿಯೊಂದು ರಸ್ತೆಯನ್ನು ಕಾಂಕ್ರಿಟ್‌ನಿಂದಲೇ ನಿರ್ಮಿಸಲಾಗಿದೆ. ಮನೆ ಎದುರಿನ ರಸ್ತೆಗಳನ್ನು ಸಹ ಕಾಂಕ್ರೀಟಿಕರಣ ಮಾಡಲಾಗಿದೆ. ಪ್ರತಿಯೊಂದು ಮನೆಗಳಿಗೆ ಉಚಿತ ಫ್ಯಾನ್ ನೀಡಲು ಟಾಟಾ ಕಂಪೆನಿ ನಿರ್ಧರಿಸಿದೆ.ನವ ಮಣ್ಣೂರು ಗ್ರಾಮ ವಿದ್ಯುತ್ ಕಡಿತ ಮುಕ್ತ ಗ್ರಾಮವಾಗಲದೆ. ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಗ್ರಾಮಕ್ಕೆ ದಿನದ 24ಗಂಟೆಯೂ ವಿದ್ಯುತ್ ಸಂಪರ್ಕ ದೊರೆಯಲಿದೆ.

ಇದೊಂದು ಸುವ್ಯವಸ್ಥಿತ ಹಾಗೂ ಸುಸಜ್ಜಿತ ಗ್ರಾಮವಾಗಿದ್ದು, ಗ್ರಾಮದ ಜನತೆಗೆ ಅವಶ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ಟಾಟಾ ಕಂಪನಿಯ ಟಾಟಾ ಪರಿಹಾರ ಸಮಿತಿ ಮುಂದಾಗಿದೆ. ಉತ್ತಮ ಉದ್ಯಾನ, ಕ್ರೀಡಾ ಮೈದಾನ, ಗಟಾರು ನಿರ್ಮಾಣ, ಅತ್ಯಾದುನಿಕ ವಿದ್ಯುತ್ ಸಂಪರ್ಕ ಇವುಗಳನ್ನು ನೋಡಿದರೆ ಇದೊಂದು ಇಡೀ ರಾಜ್ಯದಲ್ಲಿಯೇ ಮಾದರಿ ಗ್ರಾಮವಾಗಲಿದೆ. ಇಲ್ಲಿನ ಜನರಿಗೂ ಸಹ ಟಾಟಾ ಕಂಪೆನಿಯವರ ಕೆಲಸ ತೃಪ್ತಿಯಾಗಿದೆ ಎಂದು ಹೇಳುತ್ತಾರೆ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.