ADVERTISEMENT

`ಮಣ್ಣೆತ್ತು'ಗಳಿಗೆ ಭರ್ಜರಿ ಡಿಮ್ಯಾಂಡ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 5:20 IST
Last Updated 8 ಜುಲೈ 2013, 5:20 IST

ಹಾವೇರಿ: ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಬಸವಣ್ಣ(ಎತ್ತುಗಳಿ)ಗೂ ರೈತರಿಗೂ ಅತ್ಯಂತ ಅವಿನಾಭಾವ ಸಂಬಂಧ. ಈ ಇಬ್ಬರಲ್ಲಿ ಯಾರೊಬ್ಬರು ಇಲ್ಲದಿದ್ದರೂ ಕೃಷಿ ಚಟುವಟಿಕೆಗೆ ಬಲವಾದ ಪೆಟ್ಟು ಬೀಳುತ್ತದೆ. ಇವರಿಬ್ಬರ ಸಂಬಂಧ ಗಟ್ಟಿಯಾಗಿರಬೇಕೆಂಬ ಉದ್ದೇಶದಿಂದಲೇ ನಮ್ಮ ಪೂರ್ವಿಕರು ಬಸವಣ್ಣನನ್ನು ಆರಾಧಿಸುವುದಕ್ಕಾಗಿಯೇ `ಮಣ್ಣೆತ್ತಿನ ಹಬ್ಬ'ವನ್ನು ಆಚರಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಅದು ಇಂದಿಗೂ ಅಷ್ಟೇ ಭಕ್ತಿ ಭಾವದಿಂದ ನಡೆದುಕೊಂಡು ಬಂದಿದೆ.

ಮಣ್ಣೆತ್ತಿನ ಅಮಾವಾಸ್ಯೆ ಎಂದು ಪ್ರಚಲಿತವಾಗಿರುವ ಈ ಹಬ್ಬದಲ್ಲಿ ಮಣ್ಣಿನಿಂದ ಎತ್ತುಗಳನ್ನು ತಯಾರಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೈತರೇ ಸ್ವತಃ ಎತ್ತುಗಳನ್ನು ತಯಾರಿಸಿ ಪೂಜಿಸಿದರೆ, ಗ್ರಾಮೀಣ ಪ್ರದೇಶಗಳಿಂದ ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬಂದಿರುವ ರೈತ ಕುಟುಂಬಗಳು ಸಹ ಈ ಹಬ್ಬವನ್ನು ಆಚರಿಸಲು ಮರೆಯುವುದಿಲ್ಲ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರು ಕುಂಬಾರರು ತಯಾರಿಸಿದ ಮಣ್ಣೆತ್ತುಗಳನ್ನು ಮಾರಾಟಕ್ಕೆ ತಂದು ಪೂಜೆ ಮಾಡುತ್ತಾರೆ. ಹೀಗಾಗಿ ಈ ಹಬ್ಬದಲ್ಲಿ ಮಣ್ಣೆತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ.

ಹಬ್ಬಕ್ಕೆ ಹದಿನೈದು ಮುಂಚಿತವಾಗಿಯೇ ಕುಂಬಾರರು ಮಣ್ಣೆತ್ತುಗಳನ್ನು ತಯಾರಿಸಲು ಆರಂಭಿಸುತ್ತಾರೆ. ಹಬ್ಬ ಎರಡ್ಮೂರು ದಿನ ಬಾಕಿ ಇರುವಾಗ ಮಾರುಕಟ್ಟೆ ಪ್ರದೇಶದಲ್ಲಿ ಇಲ್ಲವೇ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ.

ಮಣ್ಣೆತ್ತಿನ ಅಮಾವಾಸ್ಯೆ ಮುನ್ನಾದಿನವಾದ ಭಾನುವಾರ ನಗರದಲ್ಲಿ ಮಣ್ಣೆತ್ತುಗಳ ಮಾರಾಟ ಭರ್ಜರಿಯಾಗಿಯೇ ನಡೆಯಿತು. ಒಂದು ಜತೆ ಮಣ್ಣೆತ್ತಿನ ಬೆಲೆ ಮಾರುಕಟ್ಟೆಯಲ್ಲಿ 10ರೂಪಾಯಿಂದ ಹಿಡಿದು 25 ರೂಪಾಯಿ ವರೆಗೆ ಮಾರಾಟಮಾಡಲಾಯಿತು. ಒಂದು ಜತೆ ಮಣ್ಣೆತ್ತುಗಳನ್ನು ತೆಗೆದುಕೊಂಡರೆ ಅದಕ್ಕೆ ಮಣ್ಣಿನನಿಂದಲೇ ತಯಾರಿಸಿದ ಗ್ವಾದಲಿ (ಆಹಾರ ಹಾಕುವ ತಟ್ಟೆ)ಯನ್ನು ಉಚಿತವಾಗಿ ನೀಡುತ್ತಾರೆ.

ಮಣ್ಣೆ ಸಿಗುತ್ತಿಲ್ಲ: ಮಣ್ಣೆತ್ತಿನ ಅಮಾವಾಸ್ಯೆಗೆ ಕಡ್ಡಾಯವಾಗಿ ಬೇಕಾಗುವ ಈ ಮಣ್ಣೆತ್ತುಗಳನ್ನು ತಯಾರಿಸಲು ರಾಣೆಬೆನ್ನೂರಿನ ಬಳಿ ಇರುವ ಹೆಂಚು ತಯಾರಿಕಾ ಘಟಕದಿಂದ ಮಣ್ಣು ತರಲಾಗುತ್ತಿತ್ತು. ಆದರೆ, ಇತ್ತೀಚಿಗೆ ಅಲ್ಲಿಯೂ ಮಣ್ಣಿನ ಕೊರತೆ ಇರುವುದರಿಂದ ಅವರು ಬೇರೆಯವರಿಗೆ ಮಣ್ಣು ನೀಡುತ್ತಿಲ್ಲ. ಹೀಗಾಗಿ ಇಲ್ಲಿ ಸುತ್ತು ಮುತ್ತ ಮಣ್ಣೆತ್ತು ತಯಾರಿಸಲು ಬೇಕಾದ ಮಣ್ಣು ಸಿಗುತ್ತಿಲ್ಲ ಎಂಬುದು ತಯಾರಕರ ಕೊರಗು.

ನಾವುಗಳೇ ಕಪ್ಪು (ಜಿಗುಟು) ಮಣ್ಣು ಸಿಗುವಲ್ಲಿ ಹೋಗಿ ತೆಗೆದುಕೊಂಡು ಬರುತ್ತವೆ. ನಂತರ ಅದನ್ನು ಅರಳಿ ಹಾಕಿ ಹದ ಮಾಡಿ ಮಣ್ಣೆತ್ತುಗಳನ್ನು ತಯಾರಿಸುತ್ತೇವೆ. ಇದರಿಂದ ಒಂದು ಜೋಡಿ ಮಣ್ಣೆತ್ತು ತಯಾರಿಸಲು (ಅವುಗಳ ಅಳತೆ ಮೇಲೆ) ಕನಿಷ್ಠ 10 ರಿಂದ 15 ರೂಪಾಯಿ ಖರ್ಚಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇಟ್ಟರೇ ಅವುಗಳನ್ನು ಕೊಳ್ಳಲು ಜನರು ಮುಂದೆ ಬರುವುದಿಲ್ಲ. ಇದರಿಂದ ನಾವು ಹಾಕುವ ಶ್ರಮ ತಕ್ಕುದಾದ ಫಲ ಮಾತ್ರ ಸಿಗುತ್ತಿಲ್ಲ. ಆದರೂ ಹಿಂದಿನಿಂದ ಮಾಡುತ್ತಾ ಬಂದಿರುವ ವೃತ್ತಿಯನ್ನು ಕೈಬಿಡಬಾರದು ಎನ್ನುವ ಉದ್ದೇಶದಿಂದ ಅದನ್ನು ಮುಂದುವರೆಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಹಾವೇರಿಯ ಶರಣವ್ವ ಕುಂಬಾರ.

ಧನ್ಯತಾ ಭಾವ: ರೈತನ ಜೀವನಾಡಿಯಾಗಿರುವ ಎತ್ತುಗಳು ಆತನ ಕಷ್ಟ ಕಾರ್ಪಣ್ಯಗಳಲ್ಲಿ ಸದಾಕಾಲ ಭಾಗಿಯಾಗಿರುತ್ತವೆ. ಭೂಮಿಯಲ್ಲಿ ಉತ್ತಿ, ಬಿತ್ತಲು ಸಹಕಾರಿಯಾಗುವ ಅವುಗಳನ್ನು ದೈವಿ ಸ್ವರೂಪದಲ್ಲಿ ಕಾಣುತ್ತಾರೆ. ತಮಗೆ ಮಾಡಿದ ಉಪಕಾರ ಸ್ಮರಣೆಗಾಗಿ ರೈತರು ಮಣ್ಣಿನ ಎತ್ತುಗಳನ್ನು ತಯಾರಿಸಿ ಮನೆಯ ಜಗುಲಿಯ ಮೇಲಿಟ್ಟು ವಿವಿಧ ಬಗೆಯ ನೈವೇದ್ಯ ಹಿಡಿದು, ಆರತಿ ಬೆಳಗಿ ಪೂಜೆ ಸಲ್ಲಿಸಿ ಧನ್ಯತಾಭಾವ ಮೆರೆಯುತ್ತಾರೆ.

ಈ ಬಾರಿ ಉತ್ತಮ ಮಳೆ ಬಿದ್ದು, ಬಿತ್ತನೆ ಮುಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಸೋಯಾಭಿನ್, ಗೋವಿನಜೋಳ, ಹತ್ತಿ ಬೆಳೆಗಳು ಚನ್ನಾಗಿ ಬೆಳೆದು ಭೂತಾಯಿಗೆ ಹಸಿರು ಸೀರೆ ಉಡಿಸಿವೆ. ಹೀಗಾಗಿ ಗ್ರಾಮೀಣರಷ್ಟೇ ಅಲ್ಲದೇ ಪಟ್ಟಣ ಪ್ರದೇಶದ ಜನರು ಕೂಡಾ ಅತ್ಯಂತ ಉತ್ಸಾಹದಿಂದ ಈ ಹಬ್ಬ ಆಚರಿಸಲು ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.