ADVERTISEMENT

ಮತ್ತೆ ಕುಸಿದ ಟೊಮೆಟೊ ಬೆಲೆ

ಭಾನುವಾರದ ಬಸವೇಶ್ವರ ನಗರ ಸಂತೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 11:20 IST
Last Updated 28 ಮೇ 2018, 11:20 IST
ಹಾವೇರಿಯ ಬಸವೇಶ್ವರನಗರದ ಭಾನುವಾರ ಸಂತೆಯ ಬಳಿಕ ಉಳಿದ ಟೊಮೆಟೊವನ್ನು ವ್ಯಾಪಾರಿಗಳು ಹಾಗೂ ರೈತರು ಅಲ್ಲಲ್ಲಿ ಎಸೆದು ಹೋಗಿದ್ದಾರೆ
ಹಾವೇರಿಯ ಬಸವೇಶ್ವರನಗರದ ಭಾನುವಾರ ಸಂತೆಯ ಬಳಿಕ ಉಳಿದ ಟೊಮೆಟೊವನ್ನು ವ್ಯಾಪಾರಿಗಳು ಹಾಗೂ ರೈತರು ಅಲ್ಲಲ್ಲಿ ಎಸೆದು ಹೋಗಿದ್ದಾರೆ   

ಹಾವೇರಿ: ಕಳೆದ ಎರಡು ವಾರಗಳ ಹಿಂದೆ ₹50ರ ಗಡಿ ಸಮೀಪಿಸಿದ್ದ ಟೊಮೆಟೊ ಬೆಲೆ ದಿಢೀರನೆ ಕುಸಿದಿದ್ದು, ಕೆ.ಜಿ.ಗೆ ₹7ರಿಂದ ₹10ಕ್ಕೆ ಭಾನುವಾರ ಮಾರಾಟಗೊಂಡಿದೆ. ಇದರಿಂದ ರೈತರು ಹಾಗೂ ವ್ಯಾಪಾರಸ್ಥರು ನಷ್ಟ ಅನುಭವಿಸಿದರು.

ಮಾರುಕಟ್ಟೆಗೆ ಸ್ಥಳೀಯ ಟೊಮೆಟೊ ಹಾಗೂ ಈರುಳ್ಳಿ ಆವಕ ಹೆಚ್ಚಾಗಿದ್ದು, ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಆದರೆ, ಇನ್ನುಳಿದ ತರಕಾರಿಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ತರಕಾರಿ ವ್ಯಾಪಾರಿ ಕೊಟ್ರೇಶಪ್ಪ ಬಣಕಾರ ತಿಳಿಸಿದರು.

ತರಕಾರಿ ಬೆಲೆ ಈಗಾಗಲೇ ಇಳಿಕೆಯಾಗುತ್ತಿದ್ದು, ಮುಂದಿನ ಎರಡು ಮೂರು ವಾರಗಳಲ್ಲಿ ಇನ್ನಷ್ಟು ಅಗ್ಗವಾಗಲಿದೆ. ಇದರಿಂದ ತರಕಾರಿ ವ್ಯಾಪಾರ ಮಾಡುವುದೇ ಕಷ್ಟಸಾಧ್ಯ. ಹೀಗಾಗಿ, ತರಕಾರಿ ವ್ಯಾಪಾರದ ಬದಲಾಗಿ ಹಣ್ಣುಗಳ ವ್ಯಾಪಾರ ಆರಂಭಿಸಿದ್ದೇನೆ ಎಂದು ತಾಲ್ಲೂಕಿನ ಕರ್ಜಗಿ ಗ್ರಾಮದ ಚನ್ನಪ್ಪ ಬಸವಣ್ಣೆಪ್ಪ ಕೊತ್ವಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈರುಳ್ಳಿ ಕೆ.ಜಿ.ಗೆ ₹10ರಿಂದ ₹15ರ ವರೆಗೆ, ಹಸಿ ಮೆಣಸಿನಕಾಯಿ ಕೆ.ಜಿ.ಗೆ ₹35ರಿಂದ ₹40ರ ವರೆಗೆ ಮಾರುತ್ತಿದ್ದೇವೆ ಎಂದು ತರಕಾರಿ ವ್ಯಾಪಾರಸ್ಥೆ ಚನ್ನಮ್ಮ ಕೊಡಬಾಳ ತಿಳಿಸಿದರು.

ಹಿರೇಕಾಯಿ, ಸವತೆಕಾಯಿ, ಬೀನ್ಸ್‌, ಚವಳಿ, ಮುಳ್ಳು ಬದನೆಕಾಯಿ, ಬೆಂಡೆಕಾಯಿಯನ್ನು ಕೆ.ಜಿ.ಗೆ ₹30 ರಿಂದ ₹40ರ ವರೆಗ ಹಾಗೂ ಎಲೆಕೋಸು, ಹೂಕೋಸನ್ನು ಒಂದಕ್ಕೆ ₹10 ರಿಂದ ₹15ರ ವರೆಗೆ ಮಾರುತ್ತಿದ್ದೇವೆ,

ಟೊಮೆಟೊ ಬೆಲೆ ಅತ್ಯಂತ ಕಡಿಮೆ ಇದೆ. ಅಲ್ಲದೇ, ಮಾಗಿದ ಟೊಮೆಟೊ ಉಳಿಯುವುದಿಲ್ಲ. ಸಂತೆಯಲ್ಲಿ ಮಾರಾಟವಾಗದೇ ಉಳಿದ ಟೊಮೆಟೊವನ್ನು ವಾಪಾಸ್‌ ಮನೆಗೆ ತೆಗೆದುಕೊಂಡು ಹೋದರೆ, ಬಾಡಿಗೆ ನಷ್ಟ ಮೈಮೇಲೆ
ಬರುತ್ತದೆ. ಅದಕ್ಕಾಗಿ ಉಳಿದ ಟೊಮೆಟೊವನ್ನು ಸಂತೆಯಲ್ಲಿಯೇ ಚೆಲ್ಲಿ ಹೋಗುತ್ತಾರೆ ಎಂದು ಅವರು ತಿಳಿಸಿದರು.

ಅನಾನಸು ಒಂದಕ್ಕೆ ₹ 20ರಿಂದ ₹50ರ ವರೆಗೆ, ಪಪ್ಪಾಯ ಒಂದಕ್ಕೆ ₹ 15ರಿಂದ ₹30ರ ವರೆಗೆ, ಹಲಸು ಒಂದಕ್ಕೆ ₹ 30ರಿಂದ ₹80ರ ವರೆಗೆ, ಕಲ್ಲಂಗಡಿ ಒಂದಕ್ಕೆ ₹30ರಿಂದ ₹60ರ ವರೆಗೆ ಹಾಗೂ ನಿಂಬೆ ಹಣ್ಣು 10ಕ್ಕೆ ₹5ರಿಂದ ₹8ರ ವರೆಗೆ ಮಾರಾಟಗೊಂಡಿತು.

**
ಸಂತೆಯಲ್ಲಿ ಈರುಳ್ಳಿ ಹಾಗೂ ಟೊಮೆಟೊ ಬೆಲೆ ಮಾತ್ರ ಕಡಿಮೆಯಾಗಿದ್ದು, ಇನ್ನುಳಿದ ತರಕಾರಿ ಹಾಗೂ ದಿನಸಿ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ
- ನಿಂಗರಾಜ ಪಾಟೀಲ, ಸ್ಥಳೀಯ ಗ್ರಾಹಕ

ಪ್ರವೀಣ ಸಿ. ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.