ADVERTISEMENT

ಮಹಾಭಾರತ `ದೇಶಯಾತ್ರೆ'ಗೆ ಇಂದು ಚಾಲನೆ

ವಿವಿಧ ಭಾಷೆಗಳಿಗೆ ಅನುವಾದ, ಪ್ರಕಾಶನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 6:44 IST
Last Updated 1 ಜುಲೈ 2013, 6:44 IST

ಹುಬ್ಬಳ್ಳಿ: ಮಹಾಭಾರತದ ಶುದ್ಧಪಾಠವನ್ನು ಜನರ ಬಳಿಗೆ ತಲುಪಿಸಲು ಉಡುಪಿ ಪಲಿಮಾರು ಮಠ ದೇಶದ 100 ಕಡೆಗಳಲ್ಲಿ ಹಮ್ಮಿಕೊಂಡಿರುವ ಯೋಜನೆಯಾದ `ಮಹಾಭಾರತ ಯಾತ್ರೆ'ಗೆ ಜುಲೈ 1ರಂದು ನಗರದಲ್ಲಿ ಚಾಲನೆ ಸಿಗಲಿದೆ. ಒಂದು ವರ್ಷ ಈ ಯಾತ್ರೆ ಸಾಗಲಿದ್ದು ಉಪನ್ಯಾಸ, ಕಥೆಗಳ ವಿವರಣೆ, ಪುಸ್ತಕ ವಿತರಣೆ ಇತ್ಯಾದಿ ಕಾರ್ಯಕ್ರಮ ಇದರಲ್ಲಿ ಒಳಗೊಂಡಿರುತ್ತದೆ.

ಹುಬ್ಬಳ್ಳಿಯಲ್ಲಿ ಜುಲೈ 8ರ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್ತಿನ ಪ್ರಸಾರೋತ್ಸವದ ಮುಖ್ಯಸ್ಥ ಪಂ. ಬಿ.ಎನ್. ವೆಂಕಟೇಶಾಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

`ಭವಾನಿ ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 1ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು 2ರಂದು ಸಂಜೆ ಇದೇ ಜಾಗದಲ್ಲಿ ಪ್ರಸಾರೋತ್ಸವ ಇರುತ್ತದೆ. 3 ಮತ್ತು 4ರಂದು ತೊರವಿ ಗಲ್ಲಿಯ ರಾಘವೇಂದ್ರ ಸ್ವಾಮಿ ಮಠದಲ್ಲಿ, 5 ಮತ್ತು 6ರಂದು ರಾಮಕೃಷ್ಣ ನಗರದ ರಾಯರ ಮಠದಲ್ಲಿ ಹಾಗೂ 7 ಮತ್ತು 8ರಂದು ನವನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾರ್ಯಕ್ರಮ ನಡೆಯಲಿದೆ.  ವಿದ್ವಾನ್ ವೆಂಕಟೇಶಾಚಾರ್ಯ ಜಹಗೀರ್‌ದಾರ್, ವಿದ್ವಾನ್ ಸಮೀರಾಚಾರ್ಯ ಕಂಠಪಲ್ಲಿ, ವಿದ್ವಾನ್ ಎಂ.ಎ.ಅಗ್ನಿಹೋತ್ರಿ, ವಿದ್ವಾನ್ ಪ್ರದ್ಯುಮ್ನಾಚಾರ್ಯ ಜೋಶಿ ಮುಂತಾದವರು ಉಪನ್ಯಾಸ ನೀಡುವರು' ಎಂದು ಅವರು ತಿಳಿಸಿದರು.

`500 ವರ್ಷಗಳ ಹಿಂದೆ ತುಳು ಲಿಪಿಯಲ್ಲಿ ರಚನೆಗೊಂಡ ಮಹಾಭಾರತದ ತಾಳೆಗರಿ ಪ್ರತಿ ಪಲಿಮಾರು ಮಠದಲ್ಲಿದ್ದು ಇದನ್ನು ವಿವಿಧ ಭಾಷೆಗಳಿಗೆ ತರ್ಜುಮೆ ಮಾಡುವ ಕೆಲಸ ನಡೆಯುತ್ತಿದೆ. ಕನ್ನಡಕ್ಕೆ ಭಾಷಾಂತರಗೊಂಡ ಶ್ಲೋಕಗಳಿಗೆ ತಾತ್ಪರ್ಯ ಬರೆದು ಪ್ರಚಾರ ಮಾಡಲಾಗುವುದು. ಒಟ್ಟು ಒಂದು ಲಕ್ಷ ಮೂರು ಸಾವಿರ ಶ್ಲೋಕಗಳು ಮಹಾಭಾರತದಲ್ಲಿ ಇವೆ ಎಂಬುದು ಸಮಿತಿಗೆ ಲಭಿಸಿದ ಮಾಹಿತಿ' ಎಂದು ಅವರು ವಿವರಿಸಿದರು.

`ತುಳುವಿನಲ್ಲಿ ಲಭಿಸಿರುವ ತಾಳೆಗರಿ ಪ್ರತಿಗಳ ಶುದ್ಧ ಪಾಠದ ಆಧಾರದಲ್ಲಿ ವೀಡಿಯೋ, ಅನಿಮೇಷನ್ ಮತ್ತಿತರ ರೂಪಗಳಲ್ಲಿ ಮಹಾಭಾರತವನ್ನು ಜನರಿಗೆ ತಲುಪಿಸಲಾಗುವುದು. ಮಹಾಭಾರತ ಯಾತ್ರೆ ಕಾರ್ಯಕ್ರಮಕ್ಕೆ ಬರುವವರಿಗೆ `ಉತ್ಸಾಹಕ್ಕಾಗಿ ನೂರು ಸೂತ್ರಗಳು' ಎಂಬ ಕಿರು ಹೊತ್ತಿಗೆಯನ್ನು ವಿತರಿಸಲಾಗುವುದು' ಎಂದು ಅವರು ತಿಳಿಸಿದರು.

`ತುಳು ಲಿಪಿಯ ಮಹಾಭಾರತದ ಕನ್ನಡಾನುವಾದ ಕಾರ್ಯ ಒಟ್ಟು ರೂ 10 ಕೋಟಿ ಅಂದಾಜು ವೆಚ್ಚದ ಯೋಜನೆ. ಉಡುಪಿಯ ವಿದ್ಯಾಮಾನ್ಯ ತೀರ್ಥರ ಜನ್ಮ ಶತಮಾನೋತ್ಸವದ ಅಂಗವಾಗಿ ಸಿದ್ಧಗೊಳ್ಳಲಿರುವ ಕೃತಿ ಒಟ್ಟು 100 ಸಂಪುಟ ಹೊಂದಿರುತ್ತದೆ. ಇದರ ಒಟ್ಟು ಬೆಲೆ ರೂ 20 ಸಾವಿರ ಆಗಿದ್ದು ಪ್ರಕಟಣಾಪೂರ್ವ ಬೆಲೆ ರೂ 15,000 ನಿಗದಿ ಮಾಡಲಾಗಿದೆ' ಎಂದು ಅವರು ತಿಳಿಸಿದರು. 

`ಸೋದೆ ಮಠದ ವಾದಿರಾಜ ಸ್ವಾಮಿಗಳು ರಚಿಸಿದ ಮಹಾಭಾರತ ವ್ಯಾಖ್ಯಾನ ರೂಪದ ಕೃತಿಯಾದ `ಲಕ್ಷಾಲಂಕಾರ'ವನ್ನು ಕನ್ನಡೀಕರಿಸಲಾಗುತ್ತಿದೆ. ಆಚಾರ್ಯ ಮಧ್ವರ ಮಹಾಭಾರತ ತಾತ್ಪರ್ಯ ನಿರ್ಣಯ ಕೃತಿಯಲ್ಲಿರುವ ಮೌಲಿಕ ಮತ್ತು ತಾತ್ವಿಕ ಅಂಶಗಳನ್ನು ಇದರಲ್ಲಿ ಬಳಸಲಾಗಿದೆ.

ಮಹಾಭಾರತವನ್ನು ಇಂದು ವಿವಿಧ ರೂಪಗಳಲ್ಲಿ ಮಕ್ಕಳ ಮುಂದೆ ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಅನೇಕ ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ.

ಮಕ್ಕಳು ಭವಿಷ್ಯದಲ್ಲಿ ಇದನ್ನೇ ಸರಿಯಾದ ಮಹಾಭಾರತ ಕಥೆ ಎಂದು ಹೇಳುವ ಆತಂಕ ಮಹಾಭಾರತ ಶುದ್ಧ ಪಾಠ ಪ್ರಕಾಶನಾ ಸಮಿತಿಯನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಿತಿ ಪ್ರಕಟಿಸಲಿರುವ ಕೃತಿ ಮಹಾಭಾರತಕ್ಕೆ ಕನ್ನಡದ ದೊಡ್ಡ ಕೊಡುಗೆಯಾಗಲಿದೆ' ಎಂದು ಅವರು ನುಡಿದರು.

ಅಭಿಯಾನದ ನಿರ್ವಾಹಕ ವಿದ್ವಾನ್ ಸಮೀರಾಚಾರ್ಯ ಕಂಠಪಲ್ಲಿ, ಉದ್ಯಮಿ ದಯಾನಂದ ರಾವ್, ್ತ ಸುಧೀರ ಜೋಶಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.