ADVERTISEMENT

ಮಾಂಸದ ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮೇ 2012, 10:15 IST
Last Updated 8 ಮೇ 2012, 10:15 IST

ಶಿಗ್ಗಾವಿ: ಮಾಂಸದ ಮಾರುಕಟ್ಟೆ ಸ್ಥಳಾಂತರಿಸಬೇಕು ಮತ್ತು ಮಾರು ಕಟ್ಟೆಗೆ ತಡೆಗೋಡೆ ನಿರ್ಮಿಸದಂತೆ ಆಗ್ರಹಿಸಿ ಪಟ್ಟಣದ 14ನೇ ವಾರ್ಡಿನ್  ಸಾರ್ವಜನಿಕರು ಪುರಸಭೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮಾಂಸದ ಮಾರುಕಟ್ಟೆ ನಿರ್ಮಿಸುತ್ತಿರುವ ಸಮೀಪದಲ್ಲಿ  ಲಕ್ಷ್ಮೀ ದೇವಸ್ಥಾನವಿದ್ದು ಸಾಕಷ್ಟು ಭಕ್ತ ಸಮೂಹ ನಿತ್ಯ ಪೂಜೆಗಾಗಿ ಬಂದು ಹೋಗುತ್ತಾರೆ. ಹೀಗಾಗಿ ಭಕ್ತ ಸಮೂಹಕ್ಕೆ  ಮಾರುಕಟ್ಟೆಯಿಂದ ದುರ್ವಾಸನೆ ಹಾಗೂ ಸ್ವಚ್ಚತೆ ಇಲ್ಲದಿ ರುವುದರಿಂದ ತೊಂದರೆ ಯಾಗುತ್ತಿದೆ. ಮಾಂಸದ ಇತರ ಘನತ್ಯಾಜ್ಯ ವಸ್ತು ಗಳನ್ನು ಇಲ್ಲಿಯೇ ಬಿಸಾಡು ವುದರಿಂದ ನಾಯಿ, ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ  ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿದ ತಹಶೀಲ್ದಾರ ಎಚ್‌ಕೊಟ್ರೇಶ ಅವರು ಪುರಸಭೆ ಸದಸ್ಯರ ಹಾಗೂ ಅಧಿಕಾರಿಗಳೊಂದಿಗೆ  ಚರ್ಚಿಸಿ  ಸೂಕ್ತವಾದ ನಿರ್ಣಯ ತೆಗೆದು ಕೊಳ್ಳಲಾಗುವುದು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಲ್ಲಾಭಕ್ಷ  ಸೌಧಾಗರ ಮಾತನಾಡಿ, ಸುಮಾರು 1984ರಲ್ಲಿ ಮಾಂಸದ ಮಾರುಕಟ್ಟೆಗೆಂದು ಪುರಸಭೆ ಠರಾವು ಮಾಡಲಾಗಿದೆ. ಅದರನ್ವಯವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ತಡೆ ಗೋಡೆ ನಿರ್ಮಿಸಲಾಗುತ್ತಿದೆ ಎಂದರು.

ಪುರಸಭೆ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ, ಬೆಳೆಯುತ್ತಿರುವ ಪಟ್ಟಣ ದಲ್ಲಿ ಮಾಂಸದ ಮಾರಾಟ ಮಾಡಬಹುದು. ಆದರೆ, ಪ್ರಾಣಿ ಬಲಿಗೆ ಹೊರವಲಯದಲ್ಲಿ ಸೂಕ್ತ ಸ್ಥಳವನ್ನು ನಿಗದಿಪಡಿಸಬೇಕು. ಅಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಮನವಿ ಮಾಡಿದರು.

ಪುರಸಭೆ ಸದಸ್ಯ ಅಬ್ದುಲ್‌ಕರಿಂ ಮಾತನಾಡಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತಡೆಗೋಡೆ ನಿರ್ಮಿಸಲಾಗುತ್ತಿದೆ. ಅಲ್ಲದೆ ತೊಂದರೆ ಯಾಗದಂತೆ ಲಕ್ಷ್ಮೀ ದೇವಸ್ಥಾನದಿಂದ ಸುಮಾರು 50 ಅಡಿ ಅಳತೆ ಬಿಟ್ಟು ತಡೆಗೋಡೆ  ನಿರ್ಮಿಸಲಾಗುತ್ತಿದೆ ಎಂದರು.

ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಅವರು ಮನವಿ ಮಾಡಿದರು. ನಂತರ ಸಾರ್ವಜನಿಕರು ಮುತ್ತಿಗೆ ವಾಪಸ್ಸು ಪಡೆದರು. 

ನಿವಾಸಿಗಳಾದ ಜ್ಯೋತಿ ಹಂಜಗಿ, ಆರ್.ಎನ್.ಡಂಬೂರಮತ್ತೂರ, ಶಕುಂತಲಾ ಐಹೊಳೆ, ಜಿ.ಬಿ.ಬುಡ್ರಕಟ್ಟಿ, ಜಿ.ಬಿ.ಬಂಡಿವಡ್ಡರ, ನಾಗಮ್ಮ ಬಣ್ಣಿಮಟ್ಟಿ, ಎಂ.ಬಿ.ಬಂಡಿವಡ್ಡರ, ನಿಂಗಪ್ಪ ಬಾರಕೇರ, ಉಮೇಶ ಗೌಳಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.