ADVERTISEMENT

ರೋಮಾಂಚನ ಮೂಡಿಸಿದ ಗುಡ್ಡ ಏರುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 7:20 IST
Last Updated 21 ಏಪ್ರಿಲ್ 2011, 7:20 IST

ಅಕ್ಕಿಆಲೂರ: ಇಲ್ಲಿಗೆ ಸಮೀಪದ ಹಿರೇಹುಲ್ಲಾಳ ಗ್ರಾಮದ ಗೇರಗುಡ್ಡ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಬಂಡಿಗಳ ಗುಡ್ಡ ಹತ್ತುವ ಓಟ ಸ್ಪರ್ಧೆ ಈಚೆಗೆ ನಡೆದು ಪ್ರೇಕ್ಷಕರ ಗಮನ ಸೆಳೆಯಿತು. ಗುಡ್ಡದ ಕೆಳ ಭಾಗದ ಪ್ರದೇಶದಿಂದ ತುದಿಯಲ್ಲಿನ ಬಸವೇಶ್ವರ ದೇವಸ್ಥಾನದ ವರೆಗೆ ಸುಮಾರು 80ರಿಂದ 100 ಮೀ.ನಷ್ಟು ದೂರವನ್ನು ಎತ್ತಿನ ಬಂಡಿಗಳು ಕ್ರಮಿಸುತ್ತಿದ್ದ ಮನಮೋಹಕ ದೃಶ್ಯ ನೆರೆದಿದ್ದ ಪ್ರೇಕ್ಷಕರಲ್ಲಿ ಹಬ್ಬದ ವಾತಾವರಣಕ್ಕೆ ಮೆರುಗು ನೀಡಿತ್ತು.

ಸುತ್ತಲಿನ ಅನೇಕ ಗ್ರಾಮಗಳ ರೈತರು ತಮ್ಮ ಎತ್ತಿನ ಬಂಡಿಯೊಂದಿಗೆ ವಿಶೇಷ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕ್ಷಣಹೊತ್ತು ಎತ್ತುಗಳ ಓಟದ ರಬಸವನ್ನು ಕಂಡು ಬೆಚ್ಚಿಬಿದ್ದ ಪ್ರೇಕ್ಷಕರು, ಬಂಡಿಗಳನ್ನು ಎಳೆದೊಯ್ದು ಬಿಸಾಡುವ ಭಯವೂ ಇತ್ತು. ಈ ಆತಂಕವನ್ನು ನಿಧಾನವಾಗಿ ನಿವಾರಿಸಿದ ಎತ್ತುಗಳು ನಿರಾಯಾಸವಾಗಿ ಗುಡ್ಡದ ತುದಿ ತಲುಪಿ ವಾಪಸ್ಸಾದವು. ಆರಂಭದಿಂದಲೇ ಎತ್ತುಗಳು ಗುಡ್ಡದಲ್ಲಿ ದೂಳೆಬ್ಬಿಸುತ್ತಾ ಓಟಕ್ಕೆ ನಿಲ್ಲುತ್ತಿದ್ದ ಗಳಿಗೆ ವಿಶೇಷವಾಗಿತ್ತು. ಸಿಳ್ಳೆ, ಕೇಕೆ, ಪಟಾಕಿಗಳ ಸದ್ದು ಎತ್ತುಗಳ ಓಟಕ್ಕೆ ಹುರಿದುಂಬಿಸುತ್ತಿದ್ದರೆ, ಮತ್ತೆ ಕೆಲವರು ಛತ್ರಿ ಹಿಡಿದು ಬೆದರಿಸುವ ಪ್ರಯತ್ನ ಮಾಡಿದರು. ಕೆಲವು ಎತ್ತುಗಳು ಸರಳವಾಗಿ ಬಂಡಿಗಳನ್ನು ಗುಡ್ಡದ ತುದಿ ತಲುಪಿದರೆ, ಇನ್ನು ಕೆಲವು ಜನಸಂದಣಿಯತ್ತ ದೌಡಾಯಿಸಿ ಭಯದ ಸನ್ನಿವೇಶವನ್ನು ಸೃಷ್ಟಿಸಿದ್ದವು.

ಸ್ಪರ್ಧೆಯ ಆರಂಭಕ್ಕೂ ಮುನ್ನ ಎತ್ತು ಬಂಡಿಗಳನ್ನು ವಿಶೇಷವಾಗಿ ಸಿಂಗರಿಸಿದ್ದ ರೈತರು ಪೂಜೆ ಸಲ್ಲಿಸಿ ಕರೆತರುತ್ತಿದ್ದರು. ಎತ್ತುಗಳಿಗೆ ಜೂಲ, ಗರಿಗರಿಯಾದ ರಿಬ್ಬನ್ನು, ಮೂಗುದಾರ, ಕಾಲಿಗೆ ಗೆಜ್ಜೆ ಇನ್ನಿತರ ಅಲಂಕಾರಿಕ ವಸ್ತುಗಳನ್ನು ಕಟ್ಟಿದ್ದರು. ಹೊಲಮನೆಗಳಲ್ಲಿ ದುಡಿದು ದಣಿದ ಎತ್ತುಗಳು ಕೃಷಿ ಚಟುವಟಿಕೆಯ ಬಿಡುವಿನ ಸಮಯದಲ್ಲಿ ಮೈಚಳಿ ಬಿಟ್ಟು ಓಡಾಡಲಿ ಎಂಬ ಉದ್ದೇಶದಿಂದ ಸ್ಪರ್ಧೆ ಏರ್ಪಡಿಸಲಾಗಿತ್ತು. ಅನಾಹುತಕಾರಿ ಘಟನೆಗಳ ಸಾಧ್ಯತೆಯ ಸಾಹಸಮಯ ಎತ್ತುಬಂಡಿ ಓಟದ ಸ್ಪರ್ಧೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತರೀತಿಯಿಂದ ತೆರೆಕಂಡಿದ್ದು ಮಾತ್ರ ವಿಶೇಷವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.