ADVERTISEMENT

ವಕೀಲರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 4:30 IST
Last Updated 3 ಮಾರ್ಚ್ 2012, 4:30 IST

ಹಾವೇರಿ:  ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ಹಲ್ಲೆ ನಡೆಸಿರುವುದನ್ನು ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ. ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಚವಡಿ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪತ್ರಕರ್ತರು, ಘಟನೆಯನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನಿಪ ಅಧ್ಯಕ್ಷ ನಿಂಗಪ್ಪ ಚವಡಿ ಮಾತನಾಡಿ, ವರದಿ ಮಾಡಲು ನ್ಯಾಯಾಲಯಕ್ಕೆ ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿ ಮಾರಣಾಂತಿಕ ಹಲ್ಲೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರಲ್ಲದೇ, ಅನಾಗರಿಕರಂತೆ ಸಿಕ್ಕ ಸಿಕ್ಕವರನ್ನು ಹೊಡೆದು ಗಂಭೀರವಾಗಿ ಗಾಯಗೊಳಿಸಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ ವಕೀಲರ ಗೂಂಡಾ ವರ್ತನೆ ಖಂಡನೀಯ ಎಂದು ಹೇಳಿದರು.

ರಾಜ್ಯದಲ್ಲಿ ಮಾಧ್ಯಮದವರಿಗೆ ಜೀವ ಬೆದರಿಕೆ ಹಾಗೂ ಅವರ ಮೇಲೆ ಹಲ್ಲೆ ನಡೆಸುವುದು ಇದೇ ಮೊದಲಲ್ಲ. ಇಂತಹ ಘಟನೆಗಳು ಆಗಾಗ ಘಟಿಸುತ್ತಲಿವೆ. ಆದರೂ ಕೂಡಾ ಸರ್ಕಾರ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಇಂತಹ ಘಟನೆಗಳು ಮರಕಳಿಸುತ್ತಿವೆ.

ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತಮ್ಮ ಬೇಡಿಕೆಯನ್ನು ಮುಖ್ಯ ಮಂತ್ರಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಶಿವಾನಂದ ಗೊಂಬಿ, ನಟರಾಜ್, ಬಸವರಾಜ ಮರಳಿಹಳ್ಳಿ, ಅಶೋಕ ಕಾಶೆಟ್ಟಿ, ವಿಜಯ್ ಹೂಗಾರ, ಮೆಹಬೂಬ ಅದ್ವಾನಿ ಅಲ್ಲದೇ ಮತ್ತಿತರರು ಹಾಜರಿದ್ದರು.

ಎಸ್‌ಎಫ್‌ಐ ಖಂಡನೆ: ಸುದ್ದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು  ದೌರ್ಜನ್ಯ ನಡೆಸಿ ಅವರಿಗೆ ಕಲಿನ್ಲಿಂದ ಹೊಡೆದು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿದ ವಕೀಲರ ಅನಾಗರಿಕ, ಗೂಂಡಾ ರ್ವತನೆಯುನ್ನು ಭಾರತ ವಿದ್ಯಾರ್ಥಿ ಫೆಡ ರೇಷನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಖಂಡಿಸಿಸದೆ.

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿರುವ ಪತ್ರಿಕಾರಂಗದ ಮೇಲೆ ಇತ್ತೀಚಿಗೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಕೆಲಸ ಮಾಡಲು ಭಯದ ವಾತಾ ವರಣ  ನಿರ್ಮಾಣವಾಗುತ್ತಿರುವುದು ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿ ರುವುದು ಅಪಾಯಕಾರಿ ಬೆಳವಣಿಗೆ ಯಾಗಿದೆ ಎಂದಿದೆ.

ಮಾಧ್ಯಮದವರ ಮೆಲೆ ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು. ಆ ಮೂಲಕ ಇತರರಿಗೆ ಎಚ್ಚರಿಕೆಯನ್ನು ನಿಡಬೇಕು.
 
ಹಾಗೆಯೆ ಅತೀ ಮುಖ್ಯವಾಗಿ ಸರ್ಕಾರ ಹೊಣಗೇಡಿತ ನದಿಂದ ವರ್ತಿಸಿರುವುದರಿಂದಲೇ, ಇಂತಹ ದುರ್ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದು, ತಕ್ಷಣ ಸರ್ಕಾರ ತನ್ನ ಬೇಜವಾಬ್ದಾರಿಯನ್ನು ಬಿಟ್ಟು ಮಾಧ್ಯಮ ರಂಗಕ್ಕೆ ಹಾಗೂ ಮಾದ್ಯಮಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಎಸ್‌ಎಫ್‌ಐ ಜಿಲ್ಲಾ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರ, ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ರಾಜ್ಯ ಉಪಾಧ್ಯಕ್ಷ ನಾರಾಯಣ ಕಾಳೆ, ಜಿಲ್ಲಾ ಮುಖಂಡರಾದ ಬಸವ ರಾಜ ಬಾರ್ಕಿ, ದುರ್ಗಾ.ಜಿ,ವಿನಾಯಕ ಯಳಮಲ್ಲಿ, ಅರ್ಪಿತಾ ಮಲ್ಲಾಡದ, ನೀಲಮ್ಮ  ಎಸ್., ಮಲ್ಲಿ ಕಾರ್ಜುನ ಹಿರೇಮಠ, ಚನಬಸಯ್ಯ, ಶೀತಲಕುಮಾರ ಸೆರಿದಂತೆ ಇತರರು ಸರ್ಕಾರವನ್ನು ಒತ್ತಾಯಸಿದ್ದಾರೆ.

ಬಿಎಸ್‌ಪಿ ಖಂಡನೆ: ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿದ ಹಲ್ಲೆ ಅವರ ಗೂಂಡಾ ವರ್ತನೆಯಲ್ಲದೇ ಬೇರೇನೂ ಅಲ್ಲ. ಈ ಘಟನೆಯನ್ನು ಬಹುಜನ ಸಮಾಜವಾದಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆಯಲ್ಲದೇ, ದೇಶದ ಪ್ರತಿಯೊಬ್ಬ ನಾಗರಿಕನು ಖಂಡಿಸಬೇಕು ಎಂದು ಹೇಳಿದೆ.

ಕಾನೂನು ಪಾಲಿಸುವರೇ ಭಯೋತ್ಪಾದಕ ಹಾಗೂ ಗೂಂಡಾ ರೀತಿಯಲ್ಲಿ ವರ್ತಿಸಿ ಮಾಧ್ಯಮದವರ, ಪೊಲೀಸರ ಹಾಗೂ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದು, ಇದು ದೇಶದ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸವಾಗಿದೆ.
 
ಘಟನೆ ತಡೆಯುವಲ್ಲಿ ರಾಜ್ಯ ಗೃಹ ಇಲಾಖೆ ಹಾಗೂ ಗುಪ್ತದಳ ಇಲಾಖೆ ವಿಫಲವಾಗಿವೆ. ಈ ಎಲ್ಲ ಘಟನೆಗಳಿಗೆ ಸರ್ಕಾರವೇ ನೇರ ಹೊಣೆ ಹೊತ್ತುಕೊಳ್ಳಬೇಕಲ್ಲದೇ, ಕಪ್ಪು ಕೋಟು ಧರಿಸಿ ಕಾನೂನು ಕೈಗೆ ತೆಗೆದುಕೊಳ್ಳುವ ವಕೀಲರನ್ನು ನ್ಯಾಯಾಲಯದಿಂದ ಅಮಾನತುಗೊಳಿಸಬೇಕು ಹಾಗೂ ಘಟನೆಯಲ್ಲಿ ಭಾಗವಹಿಸಿರುವ ವಕೀಲರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದು ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಅಶೋಕ ಮರೆಣ್ಣನವರ, ರೇವಣಸಿದ್ದಪ್ಪ ಹರಮಗಟ್ಟಿ, ನಾಗರಾಜ ಹೂಗಾರ, ಹಾಲಪ್ಪ ತಿಮ್ಮೇನಹಳ್ಳಿ, ವಿಜಯಕುಮಾರ ವಿರಕ್ತಿಮಠ, ಅಣ್ಣಪ್ಪ ನಾಯ್ಕ, ರುದ್ರಯ್ಯ ಸಾಲಿಮಠ, ಶಿವಾಜಿ ದೇವಿಹೊಸೂರ, ಶಿವಾನಂದ ಗೊಂಡಕರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.