ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಭಾರಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:24 IST
Last Updated 12 ಸೆಪ್ಟೆಂಬರ್ 2013, 6:24 IST

ರಟ್ಟೀಹಳ್ಳಿ: ತುಂಗಾ ಮೇಲ್ದಂಡೆ ಯೋಜನೆ ಪ್ರಾರಂಭವಾಗಿ 13 ವರ್ಷ ಗತಿಸಿದರೂ ರೈತರಿಗೆ ಮತ್ತು ಹಿನ್ನೀರಿ ನಿಂದ ಆದ ಬೆಳೆ ನಷ್ಟ ಪರಿಹಾರ ಮತ್ತು ಉಪ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದೇ ಇರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ಆಕ್ರೋಶ ವ್ಯಕ್ತ ಪಡಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ರಟ್ಟೀಹಳ್ಳಿಯ ತುಂಗಾ ಮೇಲ್ದಂಡೆ ಕಛೇರಿಯ ಎದುರಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಬುಧವಾರ ಆರಂಭಿಸಿದ್ದು ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದರು.
ನೆಶ್ವಿ ಗ್ರಾಮದ ಹಿನ್ನೀರಿನ ಪ್ರಕರಣದಲ್ಲಿ 12 ಲಕ್ಷ ರೂಪಾಯಿ ಖರ್ಚಾಗಿದ್ದು ಕಳಪೆ ಕಾಮಗಾರಿಯಿಂದ ಕೂಡಿದೆ. ನೆಶ್ವಿ ಗ್ರಾಮದ ಮುಖ್ಯ ಕಾಲುವೆಗೆ ಕಡೂರ ಗ್ರಾಮದಿಂದ ಕಲ್ಲು ಹೇರಿಸಿ ಗಡಸು (ಹಾರ್ಡ್‌ ರಾಕ್ಸ್‌) ಎಂದು ತೋರಿಸಿ ಅವ್ಯವಹಾರ ನಡೆಸಲಾಗಿದೆ. ಈ ಎರಡು ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಎಂದು ಒತ್ತಾಯಿಸಿದರು.

ವಿವಿಧ 19 ಗ್ರಾಮಗಳಲ್ಲಿ ನಷ್ಟದ ಪರಿಹಾರದ ವಿತರಣೆ ಸಮರ್ಪಕ ಮತ್ತು ಶೀಘ್ರವಾಗಿ ನಡೆಯಬೇಕು. ಉಪ ಕಾಲುವೆಗಳಿಂದ ನೀರು ಹರಿಯುತ್ತಿಲ್ಲ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಎಲ್ಲ ಅಧಿಕಾರಿಗಳ ಮತ್ತು ನೌಕರರ ಆಸ್ತಿ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಪ್ರತಿಭಟನೆ ಕಾರ್ಯಕ್ರಮ ಮಹಾಲಕ್ಷ್ಮಿ ದೇವಸ್ಥಾನದಿಂದ ಪ್ರಾರಂಭವಾಯಿತು.  ಪ್ರತಿಭಟನೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಂಜೆ 7 ಗಂಟೆಯಾದರೂ ಹಿರಿಯ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಅಹೋರಾತ್ರಿ ನಡೆಸಲು ಸಿದ್ಧರಾದರು. ಸ್ಥಳಕ್ಕೆ ಪತ್ರಕರ್ತರು ಭೇಟಿ ನೀಡಿದ ಸಂದರ್ಭದಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಲು ರೈತರು ಸಿದ್ಧತೆ ನಡೆಸಿದ್ದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಗದಿಗೆಪ್ಪ ದಾನಮ್ಮನವರ, ತಾಲ್ಲೂಕು ಅಧ್ಯಕ್ಷ ರಾಜಶೇಖರ ದೂದಿಹಳ್ಳಿ, ಕಾರ್ಯದರ್ಶಿ ಮಲ್ಲನಗೌಡ ಸೊರಟೂರ, ಬೀರಪ್ಪ ಪೂಜಾರ, ಲೋಕಪ್ಪ ಹುಲ್ಲತ್ತಿ, ಉಮೇಶ ಹೊಸಮನಿ, ಶಿವನಗೌಡ ಪಾಟೀಲ, ಶಿವನಗೌಡ ದೊಡ್ಡಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಪಿ.ಬಿ.ದ್ಯಾವಕ್ಕಳವರ, ಲಕ್ಷ್ಮಣ ಅಸ್ವಾಲಿ, ವೀರಪ್ಪ ಬೆನ್ನೂರ, ಚಂದ್ರು ಜೋಗಿಹಳ್ಳಿ, ರುದ್ರಪ್ಪ ಕೋಟಿಹಾಳ, ಶಿವಲಿಂಗಪ್ಪ ದ್ಯಾವಕ್ಕಳವರ ಅಲ್ಲದೆ ಸುತ್ತ–ಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.