ADVERTISEMENT

ಶಿಥಿಲ ಹಂತ ತಲುಪಿದ ಗೋದಾಮು

ನಿರ್ವಹಣೆಯ ಕೊರತೆ; ಹುಳುಬಿದ್ದ ‌ಧಾನ್ಯದ ಮೂಟೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 11:46 IST
Last Updated 22 ಮೇ 2018, 11:46 IST
ಸವಣೂರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಗೋದಾಮಿನ ಬಾಗಿಲಿನ ಸ್ಥಿತಿ
ಸವಣೂರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಗೋದಾಮಿನ ಬಾಗಿಲಿನ ಸ್ಥಿತಿ   

ಸವಣೂರ: ರೈತರು ಬೆಳೆದ ಬೆಳೆಗೆ ಸಮರ್ಪಕವಾದ ರೀತಿಯಲ್ಲಿ ಬೆಲೆ ಸಿಗದಿದ್ದಾಗ ಸರಕುಗಳನ್ನು ಸುರಕ್ಷಿತವಾಗಿ ರೈತರು ಹಾಗೂ ವ್ಯಾಪಾರಿಗಳು ಬೆಳೆ ಮತ್ತು ಧಾನ್ಯಗಳನ್ನು ಇಟ್ಟು ಸಂರಕ್ಷಿಸಲು ಗೋದಾಮುಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಸವಣೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಗೋದಾಮು ಇದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.

1000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಈ ಗೋದಾಮು ಅನ್ನು 30 ವರ್ಷದ ಹಿಂದೆ ನಿರ್ಮಿಸಲಾಗಿದೆ. ತಾಲ್ಲೂಕಿನ ಸಣ್ಣ ರೈತರು ಠೇವಣಿ ಇಟ್ಟು, ಧಾನ್ಯಗಳನ್ನು ಇಲ್ಲಿ ಸುರಕ್ಷಿತವಾಗಿಟ್ಟುಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಗೋದಾಮು ನಿರ್ವಹಣೆ ಕೊರತೆಯಿಂದಾಗಿ ಇಲ್ಲಿ ಸರಕು ಇಡಲು ಹಿಂದೇಟು ಹಾಕುತ್ತಿದ್ದಾರೆ.

ಶಿಥಿಲ ಕಟ್ಟಡ: ರೈತರ ಬೆಳೆಯನ್ನು ಇಡುವ ಗೋದಾಮಿನ ಚಾವಣಿ ಹಾಳಾಗಿ ಹಾಳಾಗಿದ್ದು, ಮಳೆ ಬಂದರೆ ನೀರು ಸೋರುತ್ತಿದೆ. ಗೋದಾಮಿನ ಗೋಡೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಕಿಟಕಿ ಮತ್ತು ಬಾಗಿಲುಗಳು ಮುರಿದಿವೆ. ಕಾಂಕ್ರಿಟ್ ನೆಲ ಕಿತ್ತು ಹೋಗಿದೆ ಎಂದು ರೈತ ರಾಜು ಪಿತಾಂಬ್ರಶೆಟ್ಟಿ ದೂರಿದರು.

ADVERTISEMENT

ಗೋದಾಮಿನೊಳಗೆ ಸಂಗ್ರಹಿಸಿಟ್ಟಿರುವ ಗೋವಿನಜೋಳ ಸೇರಿದಂತೆ, ಕೆಲ ಆಹಾರ ಧಾನ್ಯಗಳು ಕೊಳೆತು ಹೋಗುವ ಹಂತದಲ್ಲಿವೆ. ರೈತರ ಪಾಲಿಗೆ ಈ ಗೋದಾಮು ಇದ್ದು ಇಲ್ಲದಂತಾಗಿದೆ. ಈ ಅವ್ಯವಸ್ಥೆ ಹಲವು ವರ್ಷಗಳಿಂದಲೂ ಇದೆ. ಆದರೆ, ಎಪಿಎಂಸಿಯವರು ಸೇರಿದಂತೆ ಯಾರೂ ಗೋದಾಮು ನವೀಕರಣಗೊಳಿಸುವ ಬಗ್ಗೆ ಆಲೋಚಿಸಿಲ್ಲ ಎಂದು
ಅವರು ಬೇಸರ ವ್ಯಕ್ತಪಡಿಸಿದರು.

ಸ್ಪಂದಿಸಿಲ್ಲ: ಗೋದಾಮಿನಲ್ಲಿ ಧಾನ್ಯಗಳ ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಿರುವ, ಇಡೀ ಕಟ್ಟಡ ಶಿಥಿಲ ಹಂತಕ್ಕೆ ತಲುಪಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಗೋದಾಮು ನವೀಕರಣಕ್ಕೆ ಮನವಿ ಕೂಡ ಮಾಡಲಾಗಿದೆ. ಆದರೆ, ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಗೋದಾಮು ಮೆಲ್ವೀಚಾರಕ ವಿಶ್ವರಾದ್ಯ ನಾಗನೂರಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಗಣೇಶಗೌಡ ಎಂ. ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.