ಹಾನಗಲ್ಲ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಧಿಕ್ಕರಿಸಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ನಡುವೆಯೇ ಇಲ್ಲಿಯ ತಾಲ್ಲೂಕು ಪಂಚಾಯಿತಿ ಪ್ರಥಮ ಪ್ರಗತಿ ಪರಿಶೀಲನಾ ಸಭೆ ಮುಗಿಯಿತು.
ಕಳೆದ ಅವಧಿಯ ಅಧ್ಯಕ್ಷ ಪದ್ಮನಾಭ ಕುಂದಾಪೂರ ಹಾಗೂ ಉಪಾಧ್ಯಕ್ಷೆ ರತ್ನವ್ವ ಕರೆವ್ವನವರ ಹಾಗೂ ನೂತನ ಸದಸ್ಯರನ್ನು ಸನ್ಮಾನಿಸುವ ಮೂಲಕ ಸಭೆ ಆರಂಭವಾಯಿತು. ಚರ್ಚೆಗೆ ಅಧ್ಯಕ್ಷರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಅಧಿಕಾರಿಗಳ ವಿರುದ್ಧ ದಾಳಿ ಶುರು ಮಾಡಿದರು.
ಸದಸ್ಯೆ ಅಬಿದಾಬಿ ನದಾಫ್, ಜನ ಸಾಮಾನ್ಯರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರದ ಯಾವುದೇ ಯೋಜನೆಯನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ದೂರಿದರು.
ವಿಧವಾ ವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಎಂಟು ತಿಂಗಳ ಹಿಂದೆಯೇ ಹಣ ಮಂಜೂರಾಗಿದ್ದರೂ ಫಲಾನುಭವಿಗಳಿಗೆ ವಿತರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಸದಸ್ಯರಾದ ಬಸವರಾಜ ಹಾದಿಮನಿ ಎಂ.ಜಿ.ಪಾಣಿಗಟ್ಟಿ, ಸುರೇಶ ನೇರ್ಕಿಮನಿ ಅವರು ಮಾತನಾಡಿ, ಕೃಷಿ ಇಲಾಖೆಯ ಯೋಜನೆಗಳು ರೈತರ ಗಮನಕ್ಕೆ ಬರುತ್ತಿಲ್ಲ, ಕೆಲವೇ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಉಳಿದವರು ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಶೀಗಿಹಳ್ಳಿ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲವಾಗಿ ಬೀಳುವ ಸ್ಥಿತಿಯಲ್ಲಿವೆ. ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವಂತೆ ಸದಸ್ಯೆ ಅನಿತಾ ಶಿವೂರ ಒತ್ತಾಯಿಸಿದರು.
ಸದಸ್ಯರಾದ ಮಲ್ಲನಗೌಡ ಪಾಟೀಲ, ಹನುಮಂತಪ್ಪ ಗೊಂದಿ, ವಿಜಯಲಕ್ಷ್ಮೀ ರುದ್ರಯ್ಯ ಹಿರೇಮಠ ಮುಂತಾದವರು ತಮ್ಮ ಕ್ಷೇತ್ರದ ಸಮಸ್ಯೆಗಳು ಕುರಿತು ಚುಟುಕಾಗಿ ಪ್ರಶ್ನಿಸಿದರು. ಎಲ್ಲರ ಪ್ರಶ್ನೆಗಳನ್ನು ಆಲಿಸಿದ ಅಧ್ಯಕ್ಷೆ ಲಲಿತಾ ಹಿರೇಮಠ ಸಮಸ್ಯೆಯ ಮೂಲ ಕಾರಣ ಗಮನಿಸಿ ಸೂಕ್ತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ನುಡಿದರು. ತಾಪಂ ಇಓ ಎ.ಬಿ. ಹೊನ್ನಾವರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.