ADVERTISEMENT

ಸಮಾಜದಲ್ಲಿ ಸಾಮರಸ್ಯ ಬೆಳೆಸಿ: ಸಿದ್ದಣ್ಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 11:01 IST
Last Updated 19 ಮಾರ್ಚ್ 2018, 11:01 IST
ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ನಡೆದ ‘ಮಾನವೀಯ ಮೌಲ್ಯಗಳ ಉನ್ನತೀಕರಣದಲ್ಲಿ ಬಸವೇಶ್ವರರ ಚಿಂತನೆಯ ಪ್ರಸ್ತುತತೆ’ ವಿಚಾರ ಸಂಕಿರಣದಲ್ಲಿ ಪ್ರೊ. ಸಿದ್ದಣ್ಣ ಲಂಗೋಟಿ ಮಾತನಾಡಿದರು
ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ನಡೆದ ‘ಮಾನವೀಯ ಮೌಲ್ಯಗಳ ಉನ್ನತೀಕರಣದಲ್ಲಿ ಬಸವೇಶ್ವರರ ಚಿಂತನೆಯ ಪ್ರಸ್ತುತತೆ’ ವಿಚಾರ ಸಂಕಿರಣದಲ್ಲಿ ಪ್ರೊ. ಸಿದ್ದಣ್ಣ ಲಂಗೋಟಿ ಮಾತನಾಡಿದರು   

ಹಾವೇರಿ: ‘ವಿದ್ಯಾರ್ಥಿಗಳು ಮೌಲ್ಯಾಧಾರಿತ ರಾಜಕೀಯೇತರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಸಾಮರಸ್ಯ ಕಾಪಾಡಲು ಮುಂದಾಗಬೇಕು’ ಎಂದು ರಾಮದುರ್ಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.

ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಹಿಂದಿ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ನಡೆದ ‘ಮಾನವೀಯ ಮೌಲ್ಯಗಳ ಉನ್ನತೀಕರಣದಲ್ಲಿ ಬಸವೇಶ್ವರರ ಚಿಂತನೆಯ ಪ್ರಸ್ತುತತೆ’ ಎಂಬ ವಿಷಯ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಇಂದು ಹಬ್ಬಿರುವ ಜಾತಿ ವ್ಯವಸ್ಥೆಯಿಂದ ಜನ ನರಳಾಡುವ ಪರಿಸ್ಥಿತಿ ಎದುರಾಗಿದೆ. ಅಂತೆ–ಕಂತೆಗಳ ಕಾರ್ಮೋಡ ಮನಃ ಶಾಂತಿಯನ್ನು ಕದಡುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಜ್ಞಾವಂತ ಯುವ ಸಮುದಾಯವು ಬಸವಣ್ಣನವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಮೂಲ ಸತ್ವವನ್ನು ಬೆಳೆಸುವ ಅಗತ್ಯತೆ ಇದೆ’ ಎಂದು ಸಲಹೆ ನೀಡಿದರು.

ADVERTISEMENT

‘ಮನದಲ್ಲಿನ ಮಲೀನತೆ ತೊಳೆಯಲು ಪ್ರಯತ್ನಿಸಬೇಕು. ಮನುಷ್ಯತ್ವವಿಲ್ಲದ ಜನ ಹೃದಯವಂತಿಕೆ ಮೆರೆಯಬೇಕಾಗಿದೆ. ಅಂತರಂಗದ ಅರಿವನ್ನು ಜಾಗೃತಗೊಳಿಸಿ ಸನ್ಮಾರ್ಗದತ್ತ ಹೆಜ್ಜೆ ಹಾಕಬೇಕಿದೆ’ ಎಂದರು.

ಕಲಬುರ್ಗಿ ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ರಂಜಾನ್ ದರ್ಗಾ ಮಾತನಾಡಿ, ‘ವೈಜ್ಞಾನಿಕ ತಳಹದಿಯ ಮೇಲೆ ಬಸವಣ್ಣನವರ ತತ್ವ-ಸಿದ್ಧಾಂತಗಳು ರೂಪುಗೊಂಡಿರುವುದಲ್ಲದೇ, ಜಗತ್ತನ್ನು ಜಾಗೃತಗೊಳಿಸಿ ಮೌಲ್ಯ ತುಂಬಿದ ಬದುಕನ್ನು ರೂಪಿಸುವಂತಹ ಗಟ್ಟಿತನ ಅವರ ದಾರ್ಶನಿಕತೆಯಲ್ಲಿತ್ತು’ ಎಂದು ಹೇಳಿದರು.

‘ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಚಿಂತನಾಶೀಲತೆಯ ದಾರಿಗಳು ಬೆಳಕು ಚೆಲ್ಲಬಲ್ಲವು. ಮುಂದಿನ ದಿನಮಾನಗಳು ಯುವಕರ ದಿನಮಾನಗಳಾಗಿವೆ. ಆದ್ದರಿಂದ, ವಿದ್ಯಾರ್ಥಿಗಳಾದವರು ಉತ್ತಮ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೆಳಗಾವಿ ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷ ಎಂ.ಸಿ.ಕೊಳ್ಳಿ, ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ಡಿ.ಶಿರೂರ, ಸದಸ್ಯರಾದ ಸಿ.ಬಿ.ಹಿರೇಮಠ, ಎಸ್.ಜೆ.ಹೆರೂರ, ಎಸ್.ಎಂ.ಹುರಳಿಕುಪ್ಪಿ, ಬಸವರಾಜ ಮಾಸೂರ, ಎಸ್.ಜೆ.ಅರಣಿ, ನಿವೃತ್ತ ಪ್ರಾಧ್ಯಾಪಕ ಕೆ.ಎಸ್.ಕೌಜಲಗಿ, ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರೊ.ಯಮುನಾ ಕೊನೆಸರ, ಶಿಗ್ಗಾವಿ ರಂಭಾಪುರಿ ಕಾಲೇಜಿನ ಡಾ.ಬಿ.ವೈ.ತೊಂಡಿಹಾಳ, ರಟ್ಟೀಹಳ್ಳಿ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಅನಿತಾ ಬೆಳಗಾಂವಕರ, ಶಶಿಕಲಾ ಎಂ.ಸಿ., ಪ್ರಾಚಾರ್ಯ ಎಸ್.ಬಿ.ನಾಡಗೌಡ, ಉಮಾ ಜಾಲಿ, ಶ್ರೀದೇವಿ ದೊಡ್ಡಮನಿ, ಎಸ್.ಜಿ.ಹುಣಸೀಕಟ್ಟಿಮಠ, ಡಾ.ಎಂ.ಪಿ.ಕಣವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.