ADVERTISEMENT

ಸರ್ಕಾರ ವಜಾಗೊಳಿಸಿ: ಕೋಳಿವಾಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:45 IST
Last Updated 26 ಫೆಬ್ರುವರಿ 2012, 9:45 IST

ಹಾವೇರಿ: ಭ್ರಷ್ಟಾಚಾರದ ಜತೆಗೆ ನೈತಿಕತೆ ಅದಃಪತನಗೊಂಡಿರುವ ರಾಜ್ಯ ಸರ್ಕಾರವು ಆಡಳಿತಾತ್ಮಕವಾಗಿ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಮುಖ್ಯ ಮಂತ್ರಿಗಳು ತಕ್ಷಣವೇ ಸರ್ಕಾರವನ್ನು ವಜಾಗೊಳಿಸಿ ಹೊಸ ಜನಾದೇಶ ಪಡೆಯಲು ಮುಂದಾಗ ಬೇಕೆಂದು ಮಾಜಿ ಸಚಿವ ಕೆ.ಬಿ. ಕೋಳಿವಾಡ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ಕುರ್ಚಿಗಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಹಗ್ಗಜಗ್ಗಾಟ ನಡೆಸುವ ಮೂಲಕ ರಾಜ್ಯದ ಹಿತವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಅಧಿಕಾರದಲ್ಲಿ ಮುಂದುವರೆಯಲು ಈ ಸರ್ಕಾರಕ್ಕೆ ಯಾವುದೇ ಅರ್ಹತೆ ಇಲ್ಲದಾಗಿದೆ ಎಂದರು.

ರಾಜ್ಯದ 123 ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿದೆ. ಇದರಿಂದ ವಿದ್ಯುತ್, ಕುಡಿಯುವ ನೀರು, ಜನರಿಗೆ ಉದ್ಯೋಗ ಹಾಗೂ ಮೇವಿನ ಸಮಸ್ಯೆಗಳು ಉಲ್ಬಣಗೊಂಡಿವೆ. ಆ ಬಗ್ಗೆ ಚಿಂತನೆ, ಸಭೆ ನಡೆಸದೇ ಬಿಜೆಪಿಯವರು, ಕೇವಲ ಕುರ್ಚಿ ಉಳಿಸಿಕೊಳ್ಳಲು ದಿನಕ್ಕೆ ಎರಡ್ಮೂರು ಸಭೆ, ಚಿಂತನ, ಮಂಥನಗಳನ್ನು ಮಾಡುತ್ತಿರುವುದು ನಿಜಕ್ಕೂ ವಿಷಾದದ ಸಂಗತಿ ಎಂದು ಹೇಳಿದರು.

ಅಧಿಕಾರಕ್ಕಾಗಿ ನಡೆದ ಗೊಂದಲ ದಿಂದ ರಾಜ್ಯ ಬಜೆಟ್ ತಯಾರಿ ನಡೆಸಲಾಗಿಲ್ಲ. ಸಂಪುಟದಲ್ಲಿ 12ಕ್ಕೂ ಹೆಚ್ಚು ಸಚಿವ ಸ್ಥಾನಗಳು ಖಾಲಿಯಿವೆ. ಸುಮಾರು 30 ಖಾತೆಗಳನ್ನು ಮುಖ್ಯಮಂತ್ರಿಗಳು ಒಬ್ಬರೆ ನಿರ್ವಹಿಸುತ್ತಿದ್ದಾರೆ. ಇಂತಹ ಸರ್ಕಾರ ಇದ್ದರೆಷ್ಟು, ಹೋದರೆಷ್ಟು ಎಂದು ಪ್ರಶ್ನಿಸಿದ ಕೊಳಿವಾಡ ಅವರು, ಕೇವಲ ಅಂಕಿ ಸಂಖ್ಯೆಯಲ್ಲಿ ಅಭಿವೃದ್ಧಿ ಯಾಗಿದೆ ಹೊರತೂ ವಸ್ತುಸ್ಥಿತಿ ಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದರು.

ಭ್ರಷ್ಟಾಚಾರಕ್ಕೆ ಕುಮ್ಮಕ್ಕು: ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಲೋಕಾಯುಕ್ತರ ನೇಮಕ ಮಾಡಲಾಗುತ್ತಿಲ್ಲ. ಉಪ ಲೋಕಾ ಯುಕ್ತರನ್ನು ಮಾಡಿದರೂ ಅಲ್ಲಿಯೂ ಅಪಸ್ವರ ಕೇಳಿಬಂದಿದೆ. ಇಡೀ ಲೋಕಾಯುಕ್ತ ವ್ಯವಸ್ಥೆಯನ್ನು ಕಡೆಗ ಣಿಸುವ ಮೂಲಕ ಸರ್ಕಾರವೇ ಭ್ರಷ್ಟಾ ಚಾರಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಸದನದಲ್ಲಿ ಶಾಸಕರು ಬ್ಲೂ ಫಿಲಂ ವೀಕ್ಷಿಸುವ ಮೂಲಕ ಸದನದ ಗೌರವಕ್ಕೆ ಧಕ್ಕೆ ತಂದಿದ್ದರೂ, ಬಿಜೆಪಿಯ ನಾಯಕರು ಮಾತ್ರ ಸಮರ್ಥನೆ ಮಾಡಿಕೊಳ್ಳುವ ಮೂಲಕ ತಮ್ಮ ವಿಚಾರಧಾರೆ ಎಂತಹದು ಎಂಬು ದನ್ನು ಬಹಿರಂಗಗೊಳಿಸಿದ್ದಾರೆ ಎಂದ ಅವರು, ಅವರು ಬ್ಲೂಫಿಲಂ ನೋಡಿರು ವುದು ಮಾಧ್ಯಮಗಳಲ್ಲಿ ಜಗಜ್ಜಾಹೀರ ವಾಗಿದ್ದರೂ ಅದರ ತನಿಖೆ ನಡೆಸಲು ಸದನ ಸಮಿತಿ ರಚಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಅವರು, ಈಗ ರಚಿಸಿರುವ ಸದನ ಸಮಿತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅದೇ ಕಾರಣಕ್ಕೆ ಕಾಂಗ್ರೆಸ್ ಸದನ ಸಮಿತಿಯಿಂದ ದೂರ ಉಳಿದೆ ಎಂದು ತಿಳಿಸಿದರು.

ಬರ ಪರಿಸ್ಥಿತಿ ಕುರಿತು ಜಿಲ್ಲಾ ಡಳಿತವೂ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯು ಒಂದುವಾರ ದಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಬರದ ವಸ್ತುಸ್ಥಿತಿ ಅಧ್ಯಯನ ಮಾಡಲಾ ಗುವುದು ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮನೋಹರ ತಹಸೀಲ್ದಾರ್, ಕಾರ್ಯ ದರ್ಶಿ ಪ್ರಕಾಶಗೌಡ ಪಾಟೀಲ, ಬಸನಗೌಡ ಮರದ, ವಕೀಲ ಶಿವಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT