ADVERTISEMENT

`ಸಿದ್ದರಾಮಯ್ಯಗೆ ಅಧಿಕಾರದ ದಾಹ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 7:14 IST
Last Updated 5 ಡಿಸೆಂಬರ್ 2012, 7:14 IST

ಹಾವೇರಿ: `ಅಧಿಕಾರದ ದಾಹ ಇರುವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹೊರತೂ ಬಿ.ಶ್ರೀರಾಮುಲು ಅವರಿಗಲ್ಲ. ಅಧಿಕಾರ ಸಿಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಅವರಿಗೆ ಬಿ.ಶ್ರೀರಾಮುಲು ಬಗ್ಗೆ ಮಾತನಾಡುವ ನೈತಿಕತೆ ಇಲ್ಲ' ಎಂದು ಬಿಎಸ್‌ಆರ್ ಕಾಂಗ್ರೆಸ್‌ನ ಜಿಲ್ಲಾ ಸಂಚಾಲಕ ವಿರೇಶ ಜಾಲವಾಡಗಿ ಹೇಳಿದರು.

ಸ್ವಾರ್ಥ ಸಾಧನೆಗೆ ಹಾಗೂ ಅಧಿಕಾರದ ಆಸೆಗಾಗಿ ರಾಷ್ಟ್ರೀಯ ಪಕ್ಷವನ್ನು ಮೂರು ಹೋಳಾಗಿ ಮಾಡಿದ್ದಾರೆ. ಪಕ್ಷದಿಂದ ತಮಗೆ ಬೇಕಾಗಿದ್ದನ್ನು ಪಡೆದುಕೊಂಡು ಅಧಿಕಾರ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಹೊಸ ಪಕ್ಷ ಸ್ಥಾಪಿಸಿದ್ದಾರೆ ಎಂದು ಸಿದ್ಧರಾಮಯ್ಯ ಮಾಡಿರುವ ಆರೋಪದ ವಿರುದ್ಧ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಶ್ರೀರಾಮುಲುಗೆ ಅಧಿಕಾರದ ಆಸೆ ಇದ್ದರೆ, ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೊಮ್ಮೆ ಜನಾದೇಶ ಪಡೆಯುಲು ಮುಂದಾಗುತ್ತಿರಲಿಲ್ಲ. ಅವರು ಬಯಸದಿದ್ದರೂ ಎರಡು ಬಾರಿ ಸಚಿವ ಸ್ಥಾನ ಅವರನ್ನು ಅರಸಿ ಬಂದಿತು. ಇದೆಲ್ಲವನ್ನು ಮರೆಮಾಚಿ ಅವರಿಗೆ ಅಧಿಕಾರದ ದಾಹ ಇದೇ ಎಂಬುದನ್ನು ಸಿದ್ದರಾಮಯ್ಯರಂತಹ ಹಿರಿಯ ರಾಜಕಾರಣಿ ಹೇಳಿರುವುದು ಸರಿಯಲ್ಲ. ಅದಕ್ಕಾಗಿ ಶ್ರೀರಾಮುಲು ಬಗ್ಗೆ ಆಡಿರುವ ಮಾತನ್ನು ಸಿದ್ಧರಾಮಯ್ಯ ಅವರು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಇಷ್ಟೊಂದು ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆಸುತ್ತಿದ್ದರೂ, ವಿಪಕ್ಷ ನಾಯಕರಾಗಿ ಸಿದ್ಧರಾಮಯ್ಯ ಅವರು ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯಲು ಸಿದ್ಧರಾಮಯ್ಯ ಅವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಹಗರಣಗಳು ಹಾಗೂ ರಾಜ್ಯದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರದಿಂದ ಜನರು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರು ತೃತೀಯ ರಂಗವಾಗಿ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್‌ನ ಬಗ್ಗೆ ಒಲವು ತೋರುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಸಿದ್ಧರಾಮಯ್ಯ ಅವರು ರಾಜ್ಯದ ಯಾವುದೇ ಒಂದು ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಎದುರು ನಿಂತು ಆಯ್ಕೆಯಾಗಲಿ. ಆಗ ಅವರ ಯೋಗ್ಯತೆ ಏನೆಂಬುದು ಗೊತ್ತಾಗಲಿದೆ ಎಂದು ಜಾಲವಾಡಗಿ ಸವಾಲು ಹಾಕಿದರು.

ಡಾ.ಸಂಜಯ ಡಾಂಗೆ ಮಾತನಾಡಿ, ಶ್ರೀರಾಮುಲು ಹಾಗೂ ಬಿ.ಎಸ್.ವೈ. ಅವರು ಹರಿಗೋಲನ್ನು ಕಳೆದುಕೊಂಡಿದ್ದು, ಮುಳುಗುವ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಸಿದ್ಧರಾಮಯ್ಯ ಮಾತು ಅವರ ಹತಾಶೆ ಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದರು.

ಹಿಂದೆ ಜೆಡಿಎಸ್‌ನಲ್ಲಿದ್ದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಹಾಗೂ ಜೆ.ಎಚ್.ಪಟೇಲರ ಹೆಸರು ಕೇಳಿ ಬಂದಿದ್ದವು. ಆಗ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾದರು. ನಂತರ ಕಾಂಗ್ರೆಸ್ ಜತೆಗಿನ ಸಮ್ಮಿಶ್ರ ಸರ್ಕಾರದಲ್ಲಿಯೂ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗದೇ ಧರ್ಮಸಿಂಗ್ ಸಿಎಂ ಆದರು.

ತಮಗೆ ಅಧಿಕಾರ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಜೆಡಿಎಸ್‌ನಲ್ಲಿದ್ದುಕೊಂಡೆ ಕಾಂಗ್ರೆಸ್ ಜತೆ ಸೇರಿ ಜೆಡಿಎಸ್ ನಿರ್ಣಾಮ ಮಾಡುವ ಹುನ್ನಾರ ನಡೆಸಿದ್ದಕ್ಕಾಗಿಯೇ ಅವರು ಪಕ್ಷದಿಂದ ಹೊರ ನಡೆಯಬೇಕಾಯಿತು. ಇದರಿಂದಲೇ ಅವರಿಗೆ ಅವರಿಗೆ ಎಷ್ಟೊಂದು ಅಧಿಕಾರ ದಾಹ ಇದೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ, ಬಿಎಸ್‌ಆರ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಗುಮಕಾರ ಅಲ್ಲದೇ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.