ADVERTISEMENT

ಸೈಕಲ್‌ ಮೇಲೆ ಜಾಗೃತಿ ಯಾತ್ರೆ

ಬೇಟಿ ಬಚಾವೊ, ಬೇಟಿ ಪಢಾವೊ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 7:30 IST
Last Updated 30 ಜನವರಿ 2016, 7:30 IST
ಸೈಕಲ್‌ನಲ್ಲಿ ಜಾಗೃತಿ ಮೂಡಿಸುತ್ತಿರುವ ಯುವಕರು
ಸೈಕಲ್‌ನಲ್ಲಿ ಜಾಗೃತಿ ಮೂಡಿಸುತ್ತಿರುವ ಯುವಕರು   

ಹಾವೇರಿ: ‘ನಮ್‌ ಮಗನಿಗೆ ಛಲೋ ಹುಡುಗಿ ಇದ್ರೆ ಹೇಳ್ರೀ..., ಸಾಕಾಗೋಯ್ತು, ಮಗನಿಗೆ ಓದಿದ ಹುಡುಗಿ ಸಿಕ್ಕಿಲ್ರೀ, ಖರ್ಚು ನಾವೇ ಹಾಕ್ತೇವಿ ಅಂದ್ರೂ, ವಧು ಇಲ್ರೀ...’ ಎಂದು ಗೊಣಗುವವರೇ ಹೆಚ್ಚಾಗಿದ್ದಾರೆ.

ಮುಂದೊಂದು ದಿನ ಗಂಡು–ಗಂಡು ಮದುವೆ ಮಾಡಬೇಕಾದ ಸ್ಥಿತಿ ಬಂದರೂ ವಿಶೇಷವೇನಿಲ್ಲ ಎನ್ನುತ್ತವೆ ವರದಿಗಳು. ಇವೆಕ್ಕಲ ಕಾರಣ ಕುಸಿಯುತ್ತಿರುವ ಗಂಡು ಮತ್ತು ಹೆಣ್ಣಿನ ಸಂಖ್ಯೆಯ ಅನುಪಾತ. 2001ರಲ್ಲಿ ಸಾವಿರಕ್ಕೆ 945 ಇದ್ದರೆ, 2011ಕ್ಕೆ 937ಕ್ಕೆ ಕುಸಿದಿದೆ.

ಹೆಣ್ಣುಮಕ್ಕಳ ಸಂಖ್ಯೆ ಹಾಗೂ ಶಿಕ್ಷಣ ಕುಸಿಯುತ್ತಿರುವ ಕಾರಣ ಕೇಂದ್ರ ಸರ್ಕಾರವೇ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನ ನಡೆಸುತ್ತಿದೆ. ಇದು ಸರ್ಕಾರದ ಯೋಜನೆಯಾದರೆ, ಹೆಣ್ಣು ಮಕ್ಕಳ  ಬಗ್ಗೆ ಜಾಗೃತಿ ಮೂಡಿಸಲು ಸ್ವತಃ ಖರ್ಚು ಮಾಡಿಕೊಂಡು ಮಹಾರಾಷ್ಟ್ರದ ಪುಣೆಯ ಮೂವರು ಎಂಜಿನಿಯರ್ ಪದವೀಧರರು ಸೈಕಲ್‌ ಮೇಲೆ ‘ಪುಣೆ– ಕನ್ಯಾಕುಮಾರಿ’ ಯಾತ್ರೆ ಮಾಡುತ್ತಿದ್ದಾರೆ.

ಜನವರಿ 25ರಂದು ಪುಣೆಯಿಂದ ಹೊರಟ ಈ ತಂಡವು, 26ರಂದು ನಾಗಥಾಣೆ, 27ರಂದು ನಿಪ್ಪಾಣಿ, 28ರಂದು ಧಾರವಾಡದಿಂದ ಆರಂಭಿಸಿ ಮಧ್ಯಾಹ್ನ ವೇಳೆಗೆ ಹಾವೇರಿಗೆ ಬಂದಿದ್ದರು. ಮೂಲತಃ  ಪುಣೆಯ ಅಕುರ್ಡಿ ಡಿ.ವೈ. ಪಾಟೀಲ್‌ ಎಂಜಿನಿಯರಿಂಗ್‌ ಕಾಲೇಜಿನ ಸಹಪಾಠಿಗಳಾಗಿದ್ದ, ಪ್ರಸ್ತುತ ಪುಣೆಯ ಹೋಟೆಲ್‌ ಉದ್ಯಮಿ ಅಭಯ್‌ ಪಠಾಣ್‌ ಗರೇ , ತಾಂತ್ರಿಕ ವಿನ್ಯಾಸಗಾರ ಸಾಗರ್‌ ವಾಡಕರ್ ಮತ್ತು ಉದ್ಯಮಿ ವಿಶಾಲ್ ತೆಲಗೆ   ಸೈಕ್ಲಿಂಗ್ ಮಾಡುತ್ತಿದ್ದಾರೆ.

‘ಕ್ರಾಂಕ್‌ರೈಡ್‌’ (CRANKRIDE) ಹೆಸರಿನ ಈ ತಂಡದ ಎರಡನೇ ಯಾತ್ರೆ ಇದಾಗಿದ್ದು, ಮೊದಲ ಬಾರಿಗೆ ಪುಣೆ–ಗೋವಾ ಹೋಗಿದ್ದರು. ಈ ಯಾತ್ರೆಯಲ್ಲಿ ಪ್ರತಿನಿತ್ಯ 130–150 ಕಿ.ಮೀ ಯಂತೆ ಸುಮಾರು 1,500 ಕಿ.ಮೀ ಸವಾರಿ ಮಾಡುವ ಮೂಲಕ ಜಾಗೃತಿ ಮೂಡಿಸುವ ಗುರಿ ಹೊಂದಿದ್ದಾರೆ.

‘ಸೈಕಲ್‌ಗೆ ಸ್ಲೋಗನ್‌ ಹಾಕಿರುವ ಕಾರಣ ಜನ ಕುತೂಹಲದಿಂದ ವೀಕ್ಷಿಸುತ್ತಾರೆ. ಅಲ್ಲದೇ, ನಾವು ನಿಲ್ಲುವ ಸ್ಥಳಗಳಲ್ಲಿ ಜನರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಆ ಮೂಲಕ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಸಾಗರ್‌ವಾಡಕರ್ ಹೇಳುತ್ತಾರೆ.

‘ಸಾಮಾನ್ಯ ಜನರಿಗೆ ತಿಳಿಯಬೇಕು. ಅದಕ್ಕಾಗಿ ನಾವು ಸರ್ಕಾರದತ್ತ ನೋಡ ಬಾರದು. ನಾಗರಿಕರಾಗಿ ನಮ್ಮಿಂದ ಸಾಧ್ಯವಾದ ಸಾಮಾಜಿಕ ಜವಾಬ್ದಾರಿ ನಿಭಾಯಿಸಬೇಕು’ ಎನ್ನುತ್ತಾರೆ ಅವರು. ‘ಬೆಳಿಗ್ಗೆ 4 ಗಂಟೆಗೆ ಎದ್ದು 5 ಗಂಟೆಗೆ ಸೈಕ್ಲಿಂಗ್‌ ಆರಂಭಿಸುತ್ತೇವೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ  ಊಟ ಮಾಡುತ್ತವೆ. ಬಳಿಕ ಸುಮಾರು 4 ಗಂಟೆ ತನಕ ಪ್ರಶಾಂತ ಸ್ಥಳದಲ್ಲಿ ವಿಶ್ರಾಂತಿ ಮಾಡಿ, ಬಳಿಕ 7 ಗಂಟೆ ತನಕ ಸೈಕ್ಲಿಂಗ್ ಮಾಡುತ್ತೇವೆ. ರಾತ್ರಿ ನೆಲೆ ನಿಂತ ಊರಿನಲ್ಲಿ ಜಾಗೃತಿ ಮೂಡಿಸುತ್ತೇವೆ’ ಎಂದು ಅಭಯ್‌ ಪಠಾಣ್‌ ಗರೇ ಹೇಳಿದರು.

‘ಸೈಕ್ಲಿಂಗ್‌ ಅಭ್ಯಾಸವೂ ಬಹಳ ಮುಖ್ಯ. ನಾನು ಪ್ರತಿನಿತ್ಯ ಕಚೇರಿಗೆ ತಲಾ 16 ಕಿ.ಮೀಯಂತೆ 32 ಕಿ.ಮೀ. ಸೈಕಲ್‌ನಲ್ಲೇ ಹೋಗುತ್ತೇನೆ. ಇದರಿಂದ ಆರೋಗ್ಯ, ಮನಸ್ಸಿನ ಶಾಂತಿ, ಒತ್ತಡ ನಿವಾರಣೆ ಸಾಧ್ಯವಾಗಿದೆ. ಖರ್ಚು ಉಳಿತಾಯವಾಗಿದೆ. ಅಲ್ಲದೇ, ಪರಿಸರದ ಬಗ್ಗೆ ಕಾಳಜಿಯೂ ಹೆಚ್ಚಿದೆ’ ಎನ್ನುತ್ತಾರೆ ಸಾಗರ್‌ ವಾಡಕರ್‌. ಅಂದಹಾಗೆ ಇವರ ಸೈಕಲ್‌ನ ಬೆಲೆ ₹ 48 ಸಾವಿರ.

ತಾನು ಹುಟ್ಟಿದ ಮನೆಯಲ್ಲದೆ ಮತ್ತೊಂದು ಮನೆ ಬೆಳಗುವುದು ಹೆಣ್ಣು ಮಾತ್ರ. ಹೀಗಾಗಿ ಅವರ ಬಗ್ಗೆ ಬಹಳಷ್ಟು ಕಾಳಜಿ ಅವಶ್ಯ
ಸಾಗರ್‌ವಾಡಕರ್,
ತಾಂತ್ರಿಕ ವಿನ್ಯಾಸಗಾರ, ಸೈಕಲ್‌ ಯಾತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.