ADVERTISEMENT

ಸ್ವಚ್ಛತೆ ನಿರ್ಲಕ್ಷಿಸಿದರೆ ಶಿಸ್ತುಕ್ರಮ

ಕೆಡಿಪಿ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 12:29 IST
Last Updated 15 ಜೂನ್ 2018, 12:29 IST

ಹಾನಗಲ್: ‘ಮುಂಗಾರು ಅವಧಿಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಪಟ್ಟಣದ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಹಂದಿಗಳ ಸಂಖ್ಯೆ ಹೆಚ್ಚಳವಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಈ ನಿರ್ಲಕ್ಷ್ಯತೆಗೆ ಪುರಸಭೆ ಅಧಿಕಾರಿಗಳು ದೊಡ್ಡ ದಂಡ ತೆರಬೇಕಾದೀತು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಎಚ್ಚರಿಸಿದರು.

ಇಲ್ಲಿನ ಸಾಮರ್ಥ್ಯಸೌಧದಲ್ಲಿ ಗುರುವಾರ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪುರಸಭೆ ಆರೋಗ್ಯ ನಿರೀಕ್ಷಕ ಎ.ಎಂ.ಚೂಡಿಗಾರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

‘ಡೆಂಗಿ, ಚಿಕುನ್ ಗುನ್ಯಾ ಮತ್ತಿತರ ರೋಗದ ಭೀತಿ ಕಾಡುತ್ತಿದೆ. ಆರೋಗ್ಯ ಇಲಾಖೆ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ನೀಡುತ್ತಿದೆ. ಆದರೆ, ಹಾನಗಲ್‌ ಪಟ್ಟಣದಲ್ಲಿ ನೈರ್ಮಲ್ಯ ಇಲ್ಲ. ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಹಲವು ಬಡಾವಣೆಗಳು ಸೊಳ್ಳೆಗಳಿಂದ ತುಂಬಿಕೊಂಡಿವೆ’ ಎಂದು ಹರಿಹಾಯ್ದರು.

ADVERTISEMENT

‘ಫಾಗಿಂಗ್‌, ಪೌಡರ್‌ ಹಾಕುವ ಮೂಲಕ ಸೊಳ್ಳೆಗಳ ಹತೋಟಿಗೆ ಕ್ರಮಕೈಗೊಳ್ಳಬೇಕು. ಅಲ್ಲಲ್ಲಿ ಹಂದಿ ಹಿಡಿದಿರುವುದನ್ನೇ ಸಾಧನೆ ಎಂದು ಹೇಳಿಕೊಳ್ಳುವುದು ಬಿಟ್ಟು ಪಟ್ಟಣವನ್ನು ಹಂದಿ ಕಾಟ ಮುಕ್ತ ಮಾಡಿರಿ’ ಎಂದು ತಾಕೀತು ಮಾಡಿದರು.

‘ಅಪೌಷ್ಟಿಕ ಮಕ್ಕಳಿಗೆ ವಿತರಿಸುವ ಔಷಧಿಗಳು ಅಂಗನವಾಡಿ ಕೇಂದ್ರಗಳಲ್ಲಿ ಬಳಕೆಯಾಗದೇ ಉಳಿದಿವೆ. ಮತ್ತೆ ಹೊಸದಾಗಿ ಔಷಧಿ ಪೂರೈಕೆಯಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಔಷಧಿಗಳನ್ನು ಕಡ್ಡಾಯವಾಗಿ ಮಕ್ಕಳಿಗೆ ನೀಡಲು ಆದೇಶಿಸಬೇಕು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚನೆ ನೀಡಿದರು.

‘21 ಅಂಗನವಾಡಿ ಕೇಂದ್ರಗಳಿಂದ 3 ವರ್ಷದ ಸುಮಾರು ₹ 25 ಸಾವಿರ ವಿದ್ಯುತ್ ಶುಲ್ಕ ಪಾವತಿಯಾಗಬೇಕು’ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣಕುಮಾರ ಸಭೆ ಗಮನಕ್ಕೆ ತಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ.ಎಚ್‌ ಮಾಹಿತಿ ನೀಡಿ, ‘ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳ ವಿತರಣೆ ಪೂರ್ಣಗೊಂಡಿದೆ. ಆದರೆ, ಉರ್ದು ಮಾಧ್ಯಮದ ಪುಸ್ತಕಗಳ ಪೂರೈಕೆ ಆಗಿಲ್ಲ. ಹೀಗಾಗಿ ಉರ್ದು ಶಾಲೆಗಳಲ್ಲಿ ಬುಕ್‌ ಬ್ಯಾಂಕ್‌ ಮೂಲಕ ಬೋಧನೆ ನಡೆಯುತ್ತಿದೆ’ ಎಂದರು.

‘ತಾಲ್ಲೂಕಿನ 320 ಪ್ರಾಥಮಿಕ ಶಾಲಾ ಕೊಠಡಿಗಳು ದುರಸ್ತಿ ಹಂತದಲ್ಲಿವೆ. ಈ ಪೈಕಿ ಸುಮಾರು 20 ಕೊಠಡಿಗಳು ಶಿಥಿಲಗೊಂಡಿದ್ದು, ಮಳೆಗೆ ಕುಸಿಯುವ ಭೀತಿ ಇದೆ. ಒಟ್ಟು 158 ಶಿಕ್ಷಕರ ಕೊರತೆ ಇದೆ. ನೇರ ನೇಮಕಾತಿ ಮೂಲಕ 82 ಹುದ್ದೆ ಭರ್ತಿಯಾಗುವ ಭರವಸೆ ಇದೆ’ ಎಂದರು.

‘ತಾಲ್ಲೂಕಿನಲ್ಲಿ ಒಟ್ಟು 71 ಸಾವಿರ ಜಾನುವಾರುಗಳಿದ್ದು, ಈವರಗೆ 32 ಸಾವಿರ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಬೇನೆ ಲಸಿಕೆ ಹಾಕಲಾಗಿದೆ’ ಎಂದು ಪಶು ವೈದ್ಯಾಧಿಕಾರಿ ಡಾ.ಗಿರೀಶ ರಡ್ಡೇರ ತಿಳಿಸಿದರು.

ಉಪಾಧ್ಯಕ್ಷೆ ಸರಳಾ ಜಾಧವ, ಸ್ಥಾಯಿ ಸಮಿತಿ ಅಧ್ಯಕ್ಷ ನಜೀರ್‌ಅಹ್ಮದ್‌ ಲೋಹಾರ ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಎಂ.ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.