ADVERTISEMENT

ಹಾನಗಲ್‌ ಅಭ್ಯರ್ಥಿಯಾಗಿದ್ದು ನನ್ನ ಭಾಗ್ಯ

ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿಕೆ; ಕುಮಾರೇಶ್ವರ ವಿರಕ್ತಮಠದ ಗದ್ದುಗೆ ದರ್ಶನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 7:35 IST
Last Updated 18 ಏಪ್ರಿಲ್ 2018, 7:35 IST

ಹಾನಗಲ್: ‘ಜಾತಿ ರಾಜಕಾರಣದ ಸೊಂಕಿಲ್ಲದ ಮತ್ತು ಜ್ಯಾತ್ಯತೀತ ಶಕ್ತಿ ಕೇಂದ್ರವೆಂದು ಗುರುತಿಸಲ್ಪಡುವ ಹಾನಗಲ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಅವಕಾಶ ಲಭಿಸಿರುವುದು ನನ್ನ ಭಾಗ್ಯ’ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾದ ಬಳಿಕ ಮಂಗಳವಾರ ಇಲ್ಲಿನ ಶ್ರೀನಿವಾಸ ಮಾನೆ ಕುಮಾರೇಶ್ವರ ವಿರಕ್ತಮಠದಲ್ಲಿ ಗದ್ದುಗೆ ದರ್ಶನ ಪಡೆದು, ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.

‘ಹಾನಗಲ್‌ ಕ್ಷೇತ್ರದ ಅಭ್ಯರ್ಥಿಯಾಗುವ ಬಯಕೆ ಇತ್ತು. ಈ ಬಗ್ಗೆ ವರಿಷ್ಠರ ಗಮನಕ್ಕೂ ತಂದಿದ್ದೆ. ಸ್ಥಳೀಯ ಶಾಸಕರ ಅನಾರೋಗ್ಯದ ಕಾರಣ, ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದ ವರಿಷ್ಠರು ನನ್ನನ್ನು ಗುರುತಿಸಿ ಅವಕಾಶ ನೀಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಅಭ್ಯರ್ಥಿ ಬದಲಿಸುವಂತೆ ಸಿ.ಎಂ ಸಿದ್ದರಾಮಯ್ಯ ಬಳಿಗೆ ಶಾಸಕರ ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್ಸಿಗರ ನಿಯೋಗ ಮಂಗಳವಾರ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾನೆ, ‘ಈಗ ಅಭ್ಯರ್ಥಿ ಬದಲಾವಣೆ ಅಸಾಧ್ಯ. ಹೈಕಮಾಂಡ್‌ ಸೂಚನೆಯಂತೆ ಏ.23 ಅಥವಾ 24ರಂದು ನಾಮಪತ್ರ ಸಲ್ಲಿಸುತ್ತೇನೆ. 25ರಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಸುತ್ತೇನೆ’ ಎಂದರು.

‘ಎರಡು ದಿನಗಳಿಂದ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯ ತಲೆದೋರಿರುವುದು ಹಾಗೂ ಪ್ರತಿಭಟನೆಗಳು ನಡೆಯುತ್ತಿರು
ವುದು ಗಮನಕ್ಕೆ ಬಂದಿದೆ. ನಾಮಪತ್ರ ಸಲ್ಲಿಕೆ ನಂತರ ಎಲ್ಲವನ್ನು ಸರಿಪಡಿಸಿಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆ ಎದುರಿಸುತ್ತೇನೆ. ಅಭ್ಯರ್ಥಿಗಳ ಘೋಷಣೆ ಬಳಿಕ, ಅಸಮಾಧಾನದ ಬೇಗುದಿ ಎಲ್ಲ ಪಕ್ಷಗಳನ್ನು ಆವರಿಸಿದೆ. ಇದಕ್ಕೆ ಕಾಂಗ್ರೆಸ್‌ ಕೂಡ ಹೊರತಾಗಿಲ್ಲ’ ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ‘ಶಾಸಕ ಮನೋಹರ ತಹಸೀಲ್ದಾರ್‌ ಅವರ ಮಾರ್ಗದರ್ಶನ ಮತ್ತು ಎಲ್ಲ ಆಕಾಂಕ್ಷಿಗಳನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಲಾಗುತ್ತದೆ’ ಎಂದರು.

ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ ಮಾತನಾಡಿ, ‘ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಸಮಾಧಾನ ಇಲ್ಲ. ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸಿಕೊಂಡು ಚುನಾವಣೆ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡ ಯಲ್ಲಪ್ಪ ಕಿತ್ತೂರ, ವಿಷ್ಣುಕಾಂತ ಜಾಧವ, ಪಾರಗಾವಕರ, ಅಹ್ಮದ್‌ಭಾಷಾ ಪೀರಜಾದೆ, ಎಂ.ಎಂ.ವೆಂಕಟಾಪೂರ, ಎಂ.ಕೆ.ಹುಬ್ಬಳ್ಳಿ, ಚೋಟಾ ನಾಯ್ಕ ಇದ್ದರು.

ಪಟ್ಟಣದ ಗ್ರಾಮದೇವಿ ದೇವಸ್ಥಾನ ಮತ್ತು ಕಾಶ್ಮೀರಿ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶ್ರೀನಿವಾಸ ಮಾನೆ, ಬಳಿಕ ಅಕ್ಕಿಆಲೂರ ಗ್ರಾಮಕ್ಕೆ ತೆರಳಿದರು.

**

ಕಣದಲ್ಲಿರುವ ಯಾರೂ ಪ್ರಬಲರಲ್ಲ. ಜನರು ಮನಸ್ಸು ಮಾಡಿದವರು ಪ್ರಬಲರಾಗುತ್ತಾರೆ. ಸಿದ್ದರಾಮಯ್ಯನವರ ಸದೃಢ ಆಡಳಿತ ಈ ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆ –  ಶ್ರೀನಿವಾಸ ಮಾನೆ, ಹಾನಗಲ್‌ ಕಾಂಗ್ರೆಸ್ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.