ADVERTISEMENT

ಹಾಲಿಗೆ ಕಡಿಮೆ ದರ ಆರೋಪ:ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 10:20 IST
Last Updated 3 ಜುಲೈ 2012, 10:20 IST

ಹಿರೇಕೆರೂರ: ಹಾಲಿಗೆ ಸಮರ್ಪಕ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಶ್ರೀಕೃಷ್ಣ ಹಾಲು ಶೀತಲೀಕರಣ ಕೇಂದ್ರದ ಎದುರು ಹಾಲು ಉತ್ಪಾದಕರು ಹಾಗೂ ರೈತಸಂಘದ ಕಾರ್ಯಕರ್ತರು ಸೋಮ ವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ ಮಾತನಾಡಿ, ತಾಲ್ಲೂಕಿನಲ್ಲಿ ಶ್ರೀಕೃಷ್ಣ ಡೇರಿಯು ರೈತರಿಂದ ಹಾಲು ಸಂಗ್ರ ಹಿಸುತ್ತಿದ್ದು, ಸಾವಿರಾರು ರೈತರು ಇದಕ್ಕೆ ಹಾಲು ಮಾರಾಟವನ್ನು ಮಾಡು ತ್ತಿದ್ದಾರೆ. ಈಚೆಗೆ ಈ ಡೇರಿ ಹಾಲಿಗೆ ಸಮರ್ಪಕವಾಗಿ ಬೆಲೆ ನೀಡುತ್ತಿಲ್ಲ, ಕೆಎಂಎಫ್‌ಗೆ ಹೋಲಿಸಿದರೆ ಕಡಿಮೆ ನೀಡುತ್ತಿದೆ. ಇದರಿಂದ ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಪ್ರತಿ ಲೀಟರ್ ಹಾಲಿಗೆ ರೂ.18ಕ್ಕಿಂತ ಹೆಚ್ಚು ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಬಸನಗೌಡ ಗಂಗಪ್ಪನವರ, ಶಂಕ್ರಪ್ಪ ಮಕ್ಕಳ್ಳಿ, ಪ್ರಭುದೇವ ನಾಡಿಗೇರ, ಸುರೇಶ ಹುಲ್ಲತ್ತಿ, ನಾಗಪ್ಪ ನೀರಲಗಿ, ಫಯಾಜ್‌ಸಾಬ್ ದೊಡ್ಡಮನಿ, ಶಾಂತಪ್ಪ ಕಡೂರ, ಹನುಮಂತಪ್ಪ ಮಾದಾಪುರ, ಮಂಜು ಗಂಗಾಪುರ, ಮರಿಗೌಡ ಬಸರೀಹಳ್ಳಿ  ಪ್ರತಿಭಟನೆಯಲ್ಲಿದ್ದರು.

ADVERTISEMENT

ಎಂ.ಡಿ.ಸ್ಪಷ್ಟನೆ: ಶ್ರೀಕೃಷ್ಣ ಡೇರಿಯ ವ್ಯವಸ್ಥಾಪಕ ನಿರ್ದೇಶಕ ಸತೀಶ ಪೈ ಮಾತನಾಡಿ, ಡೇರಿಯು ತಾಲ್ಲೂಕಿನಲ್ಲಿ 6 ವರ್ಷಗಳಿಂದ ಹಾಲು ಸಂಗ್ರಹಿಸುತ್ತಿದೆ. ಗುಣಮಟ್ಟದ ಹಾಲಿಗೆ ಉತ್ತಮವಾದ ಬೆಲೆ ನೀಡುತ್ತಿದ್ದು, ಆಹಾರ ಗುಣಮಟ್ಟ ಕಾಯ್ದೆ 2006ರ ಪ್ರಕಾರ ಕನಿಷ್ಟ ಶೇ.3.5 ಜಿಡ್ಡು ಹಾಗೂ ಎಸ್‌ಎನ್‌ಎಫ್ ಶೇ.8.50 ಹೊಂದಿದ ಹಾಲಿಗೆ ಮೂಲ ಬೆಲೆ ರೂ.18.75, ಪ್ರೋತ್ಸಾಹ ಧನ ರೂ.1 ಹಾಗೂ ಸಂಗ್ರಹಣಕಾರರ ಕಮಿಶನ್ 60 ಪೈಸೆ ನೀಡುತ್ತಿದ್ದೇವೆ. ಕೆಎಂಎಫ್ ದರಕ್ಕೆ ಹೋಲಿಕೆ ಮಾಡಿದರೆ ಇದು ಅದಕ್ಕಿಂತಲೂ ಹೆಚ್ಚಾಗುತ್ತದೆ. ಕೆಲವರು ರೈತ ಮುಖಂಡರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಗೊಂದಲ ಉಂಟಾಗಿದೆ ಎಂದು ಹೇಳಿದರು.

ಜನರಲ್ ಮ್ಯಾನೇಜರ್ ಶಂಕರಲಿಂಗೇ ಗೌಡ, ಅಪರ ನಿರ್ದೇಶಕ ಮಹೇಶ ಕಾಮತ್ ಈ ಸಂದರ್ಭದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.