ADVERTISEMENT

ಹಾವೇರಿ: ಶೇ 0.78 ನೋಟಾ ಚಲಾವಣೆ

641 ಮತಗಳು ತಿರಸ್ಕೃತ: ಅಭ್ಯರ್ಥಿಗಳನ್ನು ತಿರಸ್ಕರಿಸಿದ ಏಳು ಸಾವಿರ ಮತದಾರರು

​ಪ್ರಜಾವಾಣಿ ವಾರ್ತೆ
Published 17 ಮೇ 2018, 9:46 IST
Last Updated 17 ಮೇ 2018, 9:46 IST
ಹಾವೇರಿ: ಶೇ 0.78 ನೋಟಾ ಚಲಾವಣೆ
ಹಾವೇರಿ: ಶೇ 0.78 ನೋಟಾ ಚಲಾವಣೆ   

ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 7,743 ಮತದಾರರು ‘ನೋಟಾ’ ಚಲಾಯಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 12,39,289 ಮತದಾರರ ಪೈಕಿ 9,97,081 (ಶೇ 80.46) ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಈ ಪೈಕಿ ಶೇಕಡಾ 0.78ರಷ್ಟು ನೋಟಾ ಚಲಾಯಿಸಿದ್ದಾರೆ. ಆರು ಕ್ಷೇತ್ರಗಳಿಂದ 64 ಅಭ್ಯರ್ಥಿಗಳು ಕಣದಲ್ಲಿ ಇದ್ದರು. 8 ಅಭ್ಯರ್ಥಿಗಳಿದ್ದ ಹಾವೇರಿಯಲ್ಲಿ ಗರಿಷ್ಠ ಮತ್ತು 11 ಅಭ್ಯರ್ಥಿಗಳಿದ್ದ ಹಾನಗಲ್‌ನಲ್ಲಿ ಕನಿಷ್ಠ ನೋಟಾ ಚಲಾವಣೆಯಾಗಿವೆ.

ಎಲ್ಲ ಅಭ್ಯರ್ಥಿಗಳು ಪಡೆದ ವೈಯಕ್ತಿಕ ಮತಗಳಿಗಿಂತ ಹೆಚ್ಚು ‘ನೋಟಾ’ (NOTA)ವೇ ಚಲಾವಣೆಯಾದರೂ, ಅಭ್ಯರ್ಥಿಗಳ ಪೈಕಿ ಅತ್ಯಧಿಕ ಮತ ಪಡೆದವರೇ ವಿಜೇತರಾಗುತ್ತಾರೆ. ಫಲಿತಾಂಶ ಘೋಷಣೆಯ ಮೇಲೆ ನೋಟಾ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು. ಆದರೂ, ಜಿಲ್ಲೆಯ ಶೇ 0.78 ಮತದಾರರು ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಮೂಲಕ ತಮ್ಮ ಸಂದೇಶ ರವಾನಿಸಿದ್ದಾರೆ.

ADVERTISEMENT

ಏನಿದು ನೋಟಾ: ಚುನಾವಣಾ ನಿಯಮಾವಳಿ ಕಾಯಿದೆ 1961ರ 49 ‘ಒ’ ನಿಯಮದ ಪ್ರಕಾರ ಮತಗಟ್ಟೆಗೆ ಬಂದ ಮತದಾರನಿಗೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಮತ ಚಲಾಯಿಸಿದೇ ನಿರಾಕರಿಸುವ ಹಕ್ಕನ್ನು ನೀಡಲಾಗಿದೆ. ಈ ಹಿಂದೆ (ಬ್ಯಾಲೆಟ್‌) ಮತಪತ್ರಕ್ಕೆ ಠಸ್ಸೆ ಹೊಡೆದು ಮತಪೆಟ್ಟಿಗೆಗೆ ಹಾಕುವ ಪದ್ಧತಿ ಇತ್ತು. ಆ ಸಂದರ್ಭದಲ್ಲಿ ಮತದಾರನು ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತ ಹಾಕದಿರಲು ಇಚ್ಛಿಸಿದಲ್ಲಿ, ಅರ್ಜಿ ನಮೂನೆ –17ಎ ಪಡೆದುಕೊಂಡು, ಸಕಾರಣವನ್ನು ಬರೆದು ಮತಗಟ್ಟೆ ಅಧಿಕಾರಿಗೆ ನೀಡಬಹುದಿತ್ತು. ಅದನ್ನು ‘ನೋಟಾ’ ಎಂದು ನಿರ್ಧರಿಸುತ್ತಿದ್ದರು. ಈಗ ಮತಯಂತ್ರ (ಇ.ವಿ.ಎಂ.)ದಲ್ಲಿ ನೋಟಾ ಅವಕಾಶ ನೀಡಲಾಗಿದೆ.

ಕುಲಗೆಟ್ಟ ಮತಗಳು: ಇವಿಎಂ ಬರುವ ಮೊದಲು ಮತಪತ್ರಕ್ಕೆ ಠಸ್ಸೆ ಹೊಡೆದು ಮತಪೆಟ್ಟಿಗೆಗೆ ಹಾಕಲಾಗುತ್ತಿತ್ತು. ಆಗ, ಎರಡು ಅಥವಾ ಹೆಚ್ಚಿನ ಅಭ್ಯರ್ಥಿಗಳಿಗೆ ಗುರುತು (ಠಸ್ಸೆಯ ಶಾಯಿ) ಬಿದ್ದರೆ, ಆ ಮತವನ್ನು ತಿರಸ್ಕರಿಸಿ, ಕುಲಗೆಟ್ಟ ಮತ ಎಂದು ಪರಿಗಣಿಸಲಾಗುತ್ತಿತ್ತು.

ಈಗ ಅಂಚೆ ಮತದಾನದಲ್ಲಿ ಮಾತ್ರ ಮತಪತ್ರ ಉಳಿದಕೊಂಡಿವೆ. ಈ ಬಾರಿ ಜಿಲ್ಲೆಯಲ್ಲಿ 5,685 ಅಂಚೆ ಮತಗಳಿದ್ದವು. ಅಂಚೆ ಮತವನ್ನು ಉದ್ಯೋಗಿಗಳು ಸೇರಿದಂತೆ ಸುಶಿಕ್ಷಿತರೇ ಚಲಾಯಿಸುತ್ತಾರೆ. ಆದರೂ, ಈ ಬಾರಿ ಒಟ್ಟು 641 ಮತಗಳು ತಿರಸ್ಕೃತಗೊಂಡಿವೆ. ಅಂದರೆ, ಶೇ 11.27 ಮತಗಳು ಕುಲಗೆಟ್ಟಿವೆ. ಆದರೆ, ಹಾನಗಲ್ ಮತ್ತು ಹಿರೇಕೆರೂರ ಕ್ಷೇತ್ರದಲ್ಲಿ ಯಾವುದೇ ಮತ ತಿರಸ್ಕೃತಗೊಳ್ಳಲಿಲ್ಲ. ಶಿಗ್ಗಾವಿಯಲ್ಲಿ ಅತಿಹೆಚ್ಚು ತಿರಸ್ಕೃತಗೊಂಡಿವೆ.

**
ಇ.ವಿ.ಎಂ. ಬಂದ ಬಳಿಕ ಯಾವುದೇ ಮತಗಳು ತಿರಸ್ಕೃತಗೊಳ್ಳುತ್ತಿಲ್ಲ. ಒಟ್ಟು ತಿರಸ್ಕೃತ ಮತಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ
ಸಿದ್ದು ಹುಲ್ಲೋಳಿ, ಜಿಲ್ಲಾ ಚುನಾವಣಾ ನೋಡಲ್ ಅಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.