ADVERTISEMENT

ಹೊಸ ಮರಳು ನೀತಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:08 IST
Last Updated 11 ಡಿಸೆಂಬರ್ 2013, 6:08 IST

ಅಕ್ಕಿಆಲೂರ: ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮರಳು ಲಭ್ಯವಾಗ ದಂತಾಗಿದ್ದು, ಕಾರ್ಮಿಕರು ಉದ್ಯೋಗ ವಿಲ್ಲದೇ ಪರದಾಡುವಂತಾಗಿದೆ. ತಕ್ಷಣವೇ ಸರ್ಕಾರ ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಕೊಂಡು ಹೊಸ ಮರಳು ನೀತಿ ಜಾರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿಯ ಜೈ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಮನವಿ ಪತ್ರವನ್ನು ಸ್ಥಳೀಯ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್‌ ಡಿ.ರಾಮಚಂದ್ರಪ್ಪ ಅವರ ಮೂಲಕ ಸಲ್ಲಿಸಲಾಯಿತು. ಕಳೆದ ಹಲವು ತಿಂಗಳುಗಳಿಂದ ಸಮರ್ಪಕ ಪ್ರಮಾಣದಲ್ಲಿ ಮರಳು ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರಿ ಮತ್ತು ಖಾಸಗಿ ಕಟ್ಟಡ ನಿರ್ಮಾಣ ಕಾರ್ಯಗಳೆಲ್ಲವೂ ಸ್ಥಗಿತಗೊಂಡಿವೆ. ಇದರಿಂದಾಗಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದುಡಿಯಲು ಕೆಲಸವಿಲ್ಲದೇ ಹೊಟ್ಟೆಪಾಡಿಗೂ ಪರದಾಡು ವಂತಾಗಿದ್ದು ಈ ದುಡಿಮೆಯನ್ನೇ ನೆಚ್ಚಿಕೊಂಡಿರುವ ನೂರಾರು ಕುಟುಂಬಗಳು ಬೀದಿಗೆ ಬಂದಿವೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ಈ ವೇಳೆ ಮಾತನಾಡಿದ ಕಟ್ಟಡ ಕಾರ್ಮಿಕರ ಮುಖಂಡ ಅಲ್ತಾಫ್ ಶಿರಹಟ್ಟಿ, ಮರಳು ನೀತಿ ಜಾರಿಗೆ ವಿಳಂಬ ಮಾಡದೇ ರಾಜ್ಯ ಸರ್ಕಾರ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಒಳ್ಳೆಯ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದರು. ಕಾರ್ಮಿಕರ ಸಂಘದ ಅಧ್ಯಕ್ಷ ಹನುಮಂತಪ್ಪ ಬಾರ್ಕಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲೇಶಪ್ಪ ಮಾದರ, ಗ್ರಾಮ ಪಂಚಾಯಿತಿ ಸದಸ್ಯರಾದ ಬಷೀರ್‌ ಖಾನ್‌ ಪಠಾಣ, ಫಕ್ಕೀರಗೌಡ ಪಾಟೀಲ, ಹರೀಶ ಸುಲಾಖೆ, ಕಾರ್ಮಿಕರಾದ ಮಹ್ಮದ್‌ಜಾಫರ್‌ ಸೈಕಲ್‌ಗಾರ, ಅಬಿದುಲ್ಲಾ ಗೋಲಂದಾಸ್, ಹನುಮಂತಪ್ಪ ಕಮತದ, ಅಬ್ದುಲ್‌ಸತ್ತಾರ್‌ ಸುರಳೇಶ್ವರ, ಮುನ್ನಾ ಶೇಖಸನದಿ, ಅಬ್ದುಲ್‌ಸತ್ತಾರ ಹಿತ್ತಲಮನಿ, ಹಸನ್‌ಸಾಬ್‌ ಸಾವಿಕೇರಿ, ಶರೀಫ್‌ಸಾಬ್ ಕಾಗಿನೆಲ್ಲಿ, ಮುನೀರ್‌ ಅಂದಲಗಿ, ಮಕ್ಬೂಲ್‌ ಶಿರಹಟ್ಟಿ, ಶಹಜಾದ್, ವಾಹೀದ್‌ ಬಾಳೂರ, ಹಮೀದ್‌ಸಾಬ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.