ADVERTISEMENT

‘ಗುರುವಿನ ಸನ್ಮಾ ರ್ಗದಿಂದ ಜೀವನದಲ್ಲಿ ಮುಕ್ತಿ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:18 IST
Last Updated 9 ಜನವರಿ 2014, 6:18 IST

ಹಾವೇರಿ: ‘ಮನುಷ್ಯ ಜೀವಿಯು ಸ್ವಾರ್ಥ ಜೀವನ, ಲೌಕಿಕ ಭವ, ಬಂಧನದಿಂದ ಹೊರಬಂದು ಅಧ್ಯಾತ್ಮದತ್ತ ಒಲವು ತೋರುವ ಮೂಲಕ ಜೀವನದಲ್ಲಿ ಮುಕ್ತಿ ಪಡೆಯಬೇಕು’ ಎಂದು ಮುಂಡರಗಿ ಅನ್ನದಾನೇಶ್ವರ ಶ್ರೀಗಳು ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಮಂಗಳವಾರ ನಡೆದ ಶಿವಬಸವ ಶ್ರೀಗಳ ೬೮ನೇ ಹಾಗೂ ಶಿವಲಿಂಗ ಶ್ರೀಗಳ ೫ನೇ ಪುಣ್ಯ ಸ್ಮರಣೋತ್ಸವ, ಜಾತ್ರಾ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಇಷ್ಟಲಿಂಗ ಪೂಜೆಯ ಜತೆಗೆ ವೀರಶೈವ ತತ್ವಗಳನ್ನು ಪಾಲಿಸಬೇಕು. ಯಾರಿಗೂ ಕೇಡು ಬಯಸದೆ ಸದಾ ಗುರುವಿನ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ಮಾಡಿದರು.

ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವನಸವ ಶ್ರೀಗಳು ಮಾತನಾಡಿ, ಜಿಲ್ಲೆಯು ಕಲೆ, ಸಾಹಿತ್ಯ, ಸಂಗೀತಕ್ಕೆ ಅಪಾರ ಕೊಡುಗೆ ನೀಡಿದೆ. ಆದಾಗ್ಯೂ ಈವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯದಿರುವುದು ಬೇಸರದ ಸಂಗತಿ ಎಂದರು.

ಮತದಾನ ಮೂಲಕ ಜಿಲ್ಲೆಗಳಿಗೆ ಸಾಹಿತ್ಯ ಸಮ್ಮೇಳನ ನೀಡುವ ಮಾನದಂಡ ಕೈಬಿಟ್ಟು, ಆಯಾ ಪ್ರದೇಶದ ವಿಶೇಷತೆ, ಸಾಹಿತ್ಯ, ಸಂಗೀತಕ್ಕೆ ಸಲ್ಲಿಸಿದ ಸೇವೆಯ ಆಧಾರದ ಮೇಲೆ ಸಮ್ಮೇಳನ ನೀಡುವ ನೀತಿ ಜಾರಿಗೆ ತರಬೇಕೆಂದ ಅವರು, ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಗೆ ತರಲು ಜಿಲ್ಲೆಯ ಕನ್ನಡಪರ ಸಂಘಟನೆಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕನಕಗಿರಿಯ ಡಾ. ಚನ್ನಮಲ್ಲ ಶ್ರೀಗಳು ಮಾತನಾಡಿ, ಮಠಗಳು ಕೇವಲ ಧಾರ್ಮಿಕ ಕಾರ್ಯಗಳ ಜತೆಗೆ ಅಕ್ಷರದ ಹಸಿವಿದ್ದರಿಗೆ ಜ್ಞಾನ ದಾಸೋಹ ಮಾಡುತ್ತಿವೆ. ಸಮಾಜದ ಜನರ ಮನಸ್ಸು ಕಟ್ಟುವ ಕೆಲಸ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಮುಂಡರಗಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ವಿವಿಧ ಮಠಾಧೀಶರು ಅನ್ನದಾನೇಶ್ವರ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರೆ, ಉತ್ಸವ ಸಮಿತಿ ವತಿಯಿಂದ ವಚನ ಸಾಹಿತ್ಯಕ್ಕೆ ಸಂಬಂಧಿಸಿದ 75 ಪುಸ್ತಕಗಳನ್ನು ಶ್ರೀಗಳಿಗೆ ನೀಡಲಾಯಿತು.

ಸಮಾರಂಭದಲ್ಲಿ ತಹಶೀಲ್ದಾರ್‌ ಪಂಪನಗೌಡ ಮೇಲ್ಸಿಮೆ, ಹಾನಗಲ್ ತಹಶೀಲ್ದಾರ್ ನಾಗೇಂದ್ರ ಹೊನ್ನಳ್ಳಿ ಹಾಗೂ ನಗರಸಭೆ ಆಯುಕ್ತ ಶಿವರಾಮಯ್ಯ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

ರಾಯನಾಡು ವಿರಕ್ತಮಠ ಮಹಾಂತ ಶ್ರೀಗಳು, ಗೂಬಲಗುಡ್ಡಮಠದ ಮಲ್ಲಿಕಾರ್ಜುನ ಶ್ರೀಗಳು, ಅಗರಖೇಡ ಅಭಿನವ ಪ್ರಭು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಆರ್.ಎಸ್.ಮಡಿವಾಳ, ಬಿ.ವಿ.ಕನವಳ್ಳಿ, ಅಕ್ಕಮಹಾದೇವಿ ಹಾನಗಲ್‌ ಪ್ರಾರ್ಥಿಸಿದರು. ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯದರ್ಶಿ ವೀರಣ್ಣ ಅಂಗಡಿ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹನುಮಂತಗೌಡ ಗೊಲ್ಲರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.