ADVERTISEMENT

‘ದೌರ್ಬಲ್ಯ ನಿಯಂತ್ರಿಸಿ ಹೊಸ ಬದುಕು ನಡೆಸಿ’

ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಕಿ್ರಸ್ತ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:25 IST
Last Updated 17 ಡಿಸೆಂಬರ್ 2013, 6:25 IST

ಹಾನಗಲ್‌: ‘ತ್ಯಾಗವಿಲ್ಲದೇ ಭಾಗ್ಯವಿಲ್ಲ, ಜವಾಬ್ದಾರಿಯನ್ನು ಮರೆತು ನಡೆದಾಗ ಬದುಕು ಸ್ವೇಚ್ಛೆಯಾಗುತ್ತದೆ. ದೌರ್ಬಲ್ಯಗಳನ್ನು ನಿಯಂತ್ರಿಸಿ ಹೊಸ ಜೀವನಕ್ಕೆ ಮುಂದಾಗಬೇಕಿದೆ’ ಎಂದು ಬಾಗಲಕೋಟೆ ಜಿಲ್ಲೆಯ ಅಸಂಗಿ ಝೇವಿಯರ್‌ ದೇವಾಲಯದ ಫಾ.ರಾಜಪ್ಪ ಸಂತ ಫ್ರಾನ್ಸಿಸ್‌ ನುಡಿದರು.

ಸೋಮವಾರ ಹಾನಗಲ್‌ನ ರೋಶನಿ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ನಡೆದ ಕ್ರಿಸ್ತ ಜಯಂತಿ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ಪರರ ಏಳ್ಗೆಗಾಗಿ ಸೇವೆ ಸಲ್ಲಿಸುವುದರಲ್ಲಿ ಸಾರ್ಥಕತೆಯಿದೆ. ಹೀನಾಯ ಸ್ಥಿತಿಯಲ್ಲಿ ರುವರನ್ನು ದೈವಿ ಸ್ಥಿತಿಗೆ ಕೊಂಡೊಯ್ಯುವ ಮತ್ತು ಪಾಪ ರಹಿತ ಲೋಕಕ್ಕೆ ಮಾರ್ಗದರ್ಶನ ಮಾಡಿದ ಕ್ರಿಸ್ತನ ಸಂದೇಶಗಳು ಎಲ್ಲ ಧರ್ಮೀಯರಿಗೂ ಅನುಕರಣೀಯ’ ಎಂದು ಹೇಳಿದ ಅವರು, ಪ್ರತಿಯೊಬ್ಬ ಸಂತನಿಗೆ ಇತಿಹಾಸವಿದೆ. ಅದೇ ರೀತಿ ಪ್ರತಿಯೊಬ್ಬ ಪಾಪಿಗೂ ಭವಿಷ್ಯವಿದೆ. ಈ ಹಿನ್ನೆಲೆಯಲ್ಲಿ ನಾವು ನಿತ್ಯದ ಜೀವನದ ಮೂಲಕ ಲೋಕಕ್ಕೆ ಉಡುಗೊರೆಯಾಗಬೇಕು ಎಂದರು.

ಹಾನಗಲ್‌ನ ಮೌಲಾನ ಸೈಯದ್‌ ಮಹ್ಮದ್‌ ಹುಸೇನ್‌ ಮಾತನಾಡಿ, ‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಧರ್ಮಗಳು ಒಂದೇ ದೇವನ ಸೃಷ್ಟಿ. ಇಸ್ಲಾಂ ಹಿಂಸೆಗೆ ಬೆಂಬಲಿಸುವುದಿಲ್ಲ, ಸತ್ಯ ಶಾಂತಿ, ಮಾನವತಾವಾದ, ವಿಧೆಯತೆ ಎಂಬ ಅರ್ಥಗಳು ಇಸ್ಲಾಂ ಧರ್ಮಕ್ಕಿದೆ’ ಎಂದರು.

ಬೆಳಗಾವಿ ಸಮೀಪದ ರಾಜೂರಮಠದ  ಕುಮಾರದೇವರು ಮಾತನಾಡಿ, ‘ಎಲ್ಲ ಧರ್ಮಗಳ ಸಿದ್ಧಾಂತ ಒಂದೇ ಆಗಿದೆ. ಅವುಗಳ ಪಾಲನೆಯಾದಾಗ ಜಗತ್ತು ಶಾಂತಿವನ ಆಗಲು ಸಾಧ್ಯವಿದೆ. ಸಮಾಜ ಸೇವಾ ಸಂಸ್ಥೆಗಳು ವ್ಯಸನಮುಕ್ತಿ  ಕಾರ್ಯದಲ್ಲಿ ತೊಡಗಿದ್ದರೆ, ಮದ್ಯದಂಗಡಿಗಳ ನೀತಿಯು ಜನರನ್ನು ವ್ಯಸನಿಗಳಾಗಲು ಪ್ರಚೋದಿಸುತ್ತಿವೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಾಗಿವೆ’ ಎಂದು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಕಿಮ್ಸ್‌ನ ಮಾನಸಿಕ ತಜ್ಞ ಡಾ.ಮಹೇಶ ದೇಸಾಯಿ, ವ್ಯಸನ ಮುಕ್ತಗೊಳಿಸುವ ರೋಶನಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಸಮನ್ವಯತೆ, ಸಾಮರಸ್ಯ ಮತ್ತು ವ್ಯಸನ ಮುಕ್ತಿಗಾಗಿ ರೋಶನಿ ಸಂಸ್ಥೆ ಈ ಭಾಗದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದೆ ಎಂದು ತಹಶೀಲ್ದಾರ್‌ ಡಾ.ನಾಗೇಂದ್ರ ಹೊನ್ನಳ್ಳಿ ಪ್ರಶಂಸಿಸಿದರು.

ರೋಶನಿ ಸಂಸ್ಥೆಯ ಹುಬ್ಬಳ್ಳಿ ಪ್ರಾಂತ್ಯಾಧಿಕಾರಿ ಸಲಹೆಗಾರ ಸಿಸ್ಟರ್‌ ಸುನೀತಾ ಫರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು. ಹಾನಗಲ್‌ ಮುಖ್ಯಸ್ಥೆ ಸಿಸ್ಟರ್‌ ಅನಿತಾ ಡೊಸೋಜಾ, ಸಾಹಿತಿ ಮಾರುತಿ ಶಿಡ್ಲಾಪೂರ, ಸುದ್ದಿಮಾಧ್ಯಮದ ವಿಜಯಕುಮಾರ ಪಾಟೀಲ, ಮಲ್ಲಿಗಾರ ಗ್ರಾಮದ ಪ್ರಧಾನ ಅರ್ಚಕ ಸಂಗಯ್ಯ ಹಿರೇಮಠ ಮಾತನಾಡಿದರು.

ಇದೇ ಸಂದರ್ಭದಲ್ಲಿ ರೋಶನಿ ಸಂಸ್ಥೆಯಲ್ಲಿ ದಾಖಲಾಗಿ ಮದ್ಯ ವ್ಯಸನತೆಯಿಂದ ಮುಕ್ತರಾದವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಗುಲ್ಬರ್ಗದ ಮಲ್ಲಿಕಾರ್ಜುನ ಎಂಬುವವರು ತಮ್ಮ ಅನುಭವ ಹಂಚಿಕೊಂಡರು. ಸಿಸ್ಟರ್‌ ಪ್ರಿಯಾ ಸ್ವಾಗತಿಸಿದರು. ಸಿಸ್ಟರ್‌ ಡಿಂಪಲ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.