ADVERTISEMENT

‘ಭ್ರಷ್ಟಾಚಾರ ತಡೆಗೆ ರೈತರಲ್ಲಿ ಪ್ರಬಲ ಸಂಘಟನೆ ಅವಶ್ಯ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:11 IST
Last Updated 16 ಡಿಸೆಂಬರ್ 2013, 6:11 IST

ಶಿಗ್ಗಾವಿ: ‘ರೈತರ ಕೃಷಿ ಚಟುವಟಿಕೆ ಸಾಮಗ್ರಿ ನೀಡುವಲ್ಲಿ ಆಗುತ್ತಿರುವ ಲಂಚ, ಭ್ರಷ್ಟಾಚಾರ ತಡೆಗೆ ರೈತ ಸಮೂಹ ಪ್ರಬಲ ಸಂಘಟನೆ ಯಾಗುವುದು ಅವಶ್ಯವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.

ಪಟ್ಟಣದ ಮಾಮ್ಲೇದೇಸಾಯಿ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ತಾಲ್ಲೂಕು ಕೃಷಿ ಪಂಪ್‌ಸೆಟ್‌ ಬಳಕೆದಾರರ ರೈತ ಸಂಘದ ಸಭೆಯಲ್ಲಿ ಅವರು ಮಾತನಾಡಿ, ಪಂಪ್‌ಸೆಟ್‌ ಬಳಕೆದಾರರು ನಿತ್ಯ ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಪರದಾಡುತ್ತಿದ್ದಾರೆ. ರೈತ ಈ ನಾಡಿನ ಅನ್ನದಾತ ಎಂದು ಹೇಳುವ ಸರ್ಕಾರ ಆತನ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಅದರಿಂದ ರೈತ ಸಮೂಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ವಿತರಿಸುವ ಜೊತೆಗೆ ಕ್ರಮಬದ್ಧವಾಗಿ ವಿದ್ಯುತ್‌ ವಿತರಿಸಬೇಕು, ವನ್ಯ ಪ್ರಾಣಿಗಳಿಂದ ಬೆಳೆಗಳ ಹಾನಿ ತಡೆಯಿರಿ ಎಂಬ ಹಲವು ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ರೈತರು ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕಡಿಮೆಯಾಗಿದೆ ಎಂದು ಅವರು ದೂರಿದರು.

ರಾಜ್ಯದಲ್ಲಿ ಸುಮಾರು 7ಜಿಲ್ಲೆಗಳಲ್ಲಿ ಕನಕ ಬಿಟಿ ಹತ್ತಿ ಬೆಳೆಯಲಾಗುತ್ತಿದೆ. ಅದರಲ್ಲಿ ಹಾವೇರಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕನಕ ಬಿಟಿ ಹತ್ತಿ ಬೆಳೆಯಲಾಗುತ್ತಿದೆ. ಈ ಹತ್ತಿ ಬೀಜ ಕಳಪೆ ಎಂದು ಸಂಶೋಧಕರು, ತಜ್ಞರು ಪರಿಶೀಲ ನಡೆಸಿ ಕಳಪೆ ಬೀಜದಿಂದ ಹಾನಿಯಾಗಿದೆ ಎಂಬ ವರದಿ ನೀಡಿದರೂ ಸಹ ಸರ್ಕಾರ ಮತ್ತು ಕಂಪೆನಿಗಳು ಈವರೆಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಕೃಷಿ ಪಂಪ್‌ಸೆಟ್‌ ಬಳಕೆದಾರರ ರೈತ ಸಂಘದ ಅಧ್ಯಕ್ಷ ಡಾ.ಬಿ.ಎಚ್‌.ವೀರಣ್ಣ ಮಾತನಾಡಿ, ರೈತರು ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ಕಾರಣ ಏಪ್ರಿಲ್ 2002ರಿಂದ 2008ನೇ ಜುಲೈ ತಿಂಗಳ ಒಳಗಿನ ಪಂಪ್‌ಸೆಟ್‌ ಬಳಕೆದಾರರ ಬಾಕಿ ಹಣ್ಣ ಹಾಗೂ ಬಡ್ಡಿ ಹಣ್ಣವನ್ನು ಸಂಪೂರ್ಣ ಮನ್ನಾ  ಮಾಡಬೇಕು. ಪಂಜಾಬ, ಕೇರಳ ಹಾಗೂ ತಮಿಳುನಾಡಿನ ಮಾದರಿಯಲ್ಲಿ ಉಚಿತ ವಿದ್ಯುತ್‌ ವಿತರಣೆ ಮಾಡಬೇಕು. ಅನಿಯಮಿತ ಲೋಡ್‌ಶೆಡ್ಡಿಂಗ್‌ ತಡೆಯಬೇಕು. ಕನಿಷ್ಠ 12ತಾಸು ನಿಯಮಿತ 3 ಫೇಸ್‌ ವಿದ್ಯುತ್‌ ಪೂರೈಸಬೇಕು. ಪಂಪ್‌ಸೆಟ್‌ಗಳಿಗೆ ಸೋಲಾರ ವ್ಯವಸ್ಥೆ ಕಲ್ಪಿಸಬೇಕು ಎಂದರು.

ತಾಲ್ಲೂಕು ಕೃಷಿ ಪಂಪಸೆಟ್‌ ಬಳಕೆದಾರರ ರೈತ ಸಂಘದ ಕಾರ್ಯದರ್ಶಿ  ಎಫ್‌.ಸಿ.ಪಾಟೀಲ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಶಂಕರಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಸದಸ್ಯ ನಿಂಗಪ್ಪ ಜವಳಿ, ಪುರಸಭೆ ಮಾಜಿ ಸದಸ್ಯ ಅಬ್ದುಲ್‌ಕರಿಂ ಮೊಗಲಲ್ಲಿ, ಎಂ.ಎಚ್‌.ಚೋಟೆಪ್ಪನವರ ಸೇರಿದಂತೆ ಸುಮಾರು ಎರಡು ನೂರಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT