ಹಿರೇಕೆರೂರ: ನ್ಯಾಯ, ನೀತಿ, ಧರ್ಮ ಹಾಗೂ ಮಾನವೀಯತೆಯ ತಳಹದಿಯ ಮೇಲೆ ಬಡ ಜನತೆಯನ್ನು ಸಂಘಟಿಸಿ ಸಮಾಜ ಪರಿವರ್ತನೆ ಮಾಡುವ ಕಾರ್ಯದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಹೆಚ್.ಬನ್ನಿಕೋಡ ಹೇಳಿದರು.
ತಾಲ್ಲೂಕಿನ ಹಂಸಭಾವಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಕೃಷಿ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ ಮಾತನಾಡಿ, ಇಂದಿನ ಯುವಕರು ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ, ಅಲ್ಲದೇ ಕೃಷಿ ಉದ್ಯೋಗ ಇಂದಿನ ಕಾಲಮಾನದಲ್ಲಿ ಅತ್ಯಂತ ವಿರಳವಾದ ಅಂಶವಾಗಿದೆ. ಕೃಷಿಯಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಸಾಕಷ್ಟು ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.
ನಿವೃತ್ತ ಡಿವೈಎಸ್ಪಿ ಎನ್.ಎಂ.ಈಟೇರ ಮಾತನಾಡಿ, ಇಂದಿನ ಯುವಕರು ಹಳ್ಳಿಯಲ್ಲಿರುವ ತಮ್ಮ ಫಲವತ್ತಾದ ಕೃಷಿ ಭೂಮಿ ಬಿಟ್ಟು ಪಟ್ಟಣಕ್ಕೆ ವಲಸೆ ಹೊಗುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಆಹಾರಕ್ಕಾಗಿ ಪರಿತಪಿಸುವ ಕಾಲ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಷಣ್ಮುಖಯ್ಯ ಮಳಿಮಠ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಕೃಷ್ಣಪ್ಪ ಕುಲಾಲ್, ಮೋಹನಗೌಡ ಪಾಟೀಲ, ರಾಜು ಹುಚಗೊಂಡರ ಇತರರು ಉಪಸ್ಥಿತರಿದ್ದರು.
ಮೇಲ್ವಿಚಾರಕ ಅಣ್ಣಪ್ಪ ಆರ್. ನಿರೂಪಿಸಿದರು. ರಮೇಶ್ ಎಂ.ಎನ್. ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಧಾ ಪಿ.ಜಿ. ವಂದಿಸಿದರು.
ಉಸಿರು ಕಟ್ಟಿ ಕುರಿಗಳ ಸಾವು
ಹಿರೇಕೆರೂರ:ತಾಲ್ಲೂಕಿನ ಯಲವ ದಹಳ್ಳಿ ಮತ್ತು ಆಲದಗೇರಿ ಗ್ರಾಮಗಳ ಮಧ್ಯೆ ವಲಸೆ ಕುರಿಗಾರರಿಗೆ ಸೇರಿದ 24 ಕುರಿ ಮತ್ತು 3 ಮೇಕೆಗಳು ಗುಂಡಿಗೆ ಬಿದ್ದು ಉಸಿರು ಕಟ್ಟಿ ಸಾವನ್ನಪ್ಪಿವೆ.
‘ಭಾನುವಾರ ರಾತ್ರಿ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ಉಸಿರು ಕಟ್ಟಿ ಸಾವನ್ನಪ್ಪಿವೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಸಹಾಯಕ ನಿರ್ದೇಶಕ ಡಾ.ಗೋಪಿನಾಥ ತಿಳಿಸಿದ್ದಾರೆ. ಶಾಸಕ ಯು.ಬಿ.ಬಣಕಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.