ADVERTISEMENT

19 ನಕಲಿ ಕ್ಲಿನಿಕ್‌ಗಳಿಗೆ ಬೀಗ

ನಕಲಿ ವೈದ್ಯರ ಮೇಲೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:03 IST
Last Updated 20 ಡಿಸೆಂಬರ್ 2013, 6:03 IST
ಅರ್ಹತೆ ಇಲ್ಲದಿದ್ದರೂ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದ ಅಕ್ಕಿಆಲೂರಿನ ನಕಲಿ ವೈದ್ಯ ಉದಯಕುಮಾರ ಹಿರೇಮಠ ಎಂಬವರ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುವಾರ  ದಾಳಿ ನಡೆಸಿದರು
ಅರ್ಹತೆ ಇಲ್ಲದಿದ್ದರೂ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದ ಅಕ್ಕಿಆಲೂರಿನ ನಕಲಿ ವೈದ್ಯ ಉದಯಕುಮಾರ ಹಿರೇಮಠ ಎಂಬವರ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು   

ಹಾವೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಹಾಗೂ ಪೊಲೀಸರ ತಂಡ ಜಿಲ್ಲೆಯಲ್ಲಿ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಗುರುವಾರ ದಾಳಿ ನಡೆಸಿ, 19 ನಕಲಿ ವೈದ್ಯರ ಕ್ಲಿನಿಕ್‌ಗಳಿಗೆ ಬೀಗ ಜಡಿದಿದೆ.

ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನಲ್ಲಿ ೧೦, ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ನಾಲ್ಕು, ಹಾನಗಲ್ಲ ತಾಲ್ಲೂಕಿನಲ್ಲಿ  ಐದು, ಹಿರೇಕೆರೂರ ತಾಲ್ಲೂಕಿನಲ್ಲಿ ೩, ಬ್ಯಾಡಗಿ ತಾಲ್ಲೂಕಿನಲ್ಲಿ ಒಂದು ಕ್ಲಿನಿಕ್‌ ಮೇಲೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಏಕಕಾಲಕ್ಕೆ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ತಂಡವು, ಬೀಗ ಜಡಿಯುವುದರ ಜತೆಗೆ ಕ್ಲಿನಿಕ್‌ ನಡೆಸುವ ನಕಲಿ ವೈದ್ಯರ ಮೇಲೆ ಆಯಾ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ, ಇನ್ನು ಮುಂದೆ ಕ್ಲಿನಿಕ್‌ಗಳನ್ನು ತೆರೆಯದಂತೆ ಸೂಚನೆಯ ಚೀಟಿಯನ್ನು ಆಸ್ಪತ್ರೆಯ ಬಾಗಿಲಿಗೆ ಅಂಟಿಸಿದೆ.

ದಾಳಿಯ ಸುಳಿವು ಸಿಕ್ಕೊಡನೆ ಕ್ಲಿನಿಕ್‌ಗಳಿಂದ ವೈದ್ಯರು ಪರಾರಿಯಾಗಿದ್ದರು. ಇದರಿಂದ ಅಧಿಕಾರಿಗಳ ಹಾಗೂ ಪೊಲೀಸರ ತಂಡವು ವೈದ್ಯರಿಲ್ಲದ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಬೇಕಾಯಿತಲ್ಲದೇ, ಅಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿತಲ್ಲದೇ, ಕ್ಲಿನಿಕ್‌ಗಳಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಬರದಂತೆ ಸೂಚಿಸಿತು.

ನಕಲಿ ವೈದ್ಯರ ಹಾವಳಿ ನಿಯಂತ್ರಣಕ್ಕೆ ಹಾಗೂ ನಕಲಿ ವೈದ್ಯರಿಂದ ಹಲವಾರು ಅನಾಹುತಗಳು ನಡೆಯುತ್ತಿರುವುದರ ಬಗ್ಗೆ ಇಲಾಖೆ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಜಿಲ್ಲೆಯ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅನಧಿಕೃತ ಕ್ಲಿನಿಕ್‌ಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ -ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.