ADVERTISEMENT

3,443 ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:40 IST
Last Updated 26 ಫೆಬ್ರುವರಿ 2012, 9:40 IST

ಹಾವೇರಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಬಸವ ವಸತಿ ಯೋಜನೆಯ ಮನೆಗಳ ನಿರ್ಮಾಣಕ್ಕೆ 3,443 ಹಕ್ಕು ಪತ್ರಗಳ ವಿತರಣಾ ಸಮಾರಂಭ ಶನಿವಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜರುಗಿತು.

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸವಣೂರು ತಾಲ್ಲೂಕಿನ ವಿವಿಧ ಗ್ರಾಮಗಳ 1200 ಹಾಗೂ ಹಾವೇರಿ ತಾಲ್ಲೂಕಿನ 13 ಗ್ರಾಮಗಳ 2,243 ಮಹಿಳಾ ಫಲಾನುಭವಿಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಮನೆಕಟ್ಟಿಕೊಳ್ಳುವ ಸಂಬಂಧದ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ಹಕ್ಕುಪತ್ರ ವಿತರಿಸಿದ ಶಾಸಕ ನೆಹರೂ ಓಲೇಕಾರ ಮಾತನಾಡಿ, ವಿಧಾನಸಭಾ ಕ್ಷೇತ್ರಕ್ಕೆ ಈ ಮುಂಚೆ ಎರಡು ಕಂತುಗಳಲ್ಲಿ ಒಟ್ಟು 13 ಸಾವಿರ ಬಸವ ವಸತಿ ಯೋಜನೆ ಅಡಿ ಮನೆಗಳು ಮಂಜೂರಾಗಿದ್ದವು. ಇದೀಗ 3ನೇ ಕಂತಿನಲ್ಲಿ ಮತ್ತೆ 5000 ಮನೆಗಳು ಮಂಜೂರಾಗಿವೆ. ಕ್ಷೇತ್ರದಲ್ಲಿನ ಎಲ್ಲ ಬಡ ಜನತೆಗೆ ಮನೆ ಮಂಜೂರು ಮಾಡಿಸುವ ಯತ್ನವಾಗಿದೆ ಎಂದರು.

ಮಂಜೂರಾದ ಮನೆಗಳಿಗೆ ಫಲಾನುಭವಿಗಳು ಯಾವುದೇ ಮಧ್ಯವರ್ತಿಗೆ ಹಣ ನೀಡಬೇಕಾದ ಅಗತ್ಯವಿಲ್ಲ. ಈ ಕಾರಣಕ್ಕಾಗಿಯೇ ಫಲಾನುಭವಿಗಳನ್ನು ಕರೆದು ನೇರವಾಗಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ಪ್ರತಿ ಫಲಾನುಭವಿ 63,500 ರೂ.ಗಳಲ್ಲಿ ಮನೆ ಕಟ್ಟಿಕೊಳ್ಳಬೇಕಿದೆ. ಇದರಲ್ಲಿ 50 ಸಾವಿರ ರೂ. ಸಹಾಯಧನ, 10 ಸಾವಿರ ರೂ. ಸಾಲ ಹಾಗೂ 3,500 ರೂ.ಗಳ ಫಲಾನುಭವಿಗಳ ವಂತಿಗೆ ಸೇರಿದೆ ಎಂದರು.

ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ಕಡುಬಡವರಿಗೆ ನೆಮ್ಮದಿ ಬದುಕು ನೀಡಲು ಸರ್ಕಾರ ಈ ವಸತಿ ಯೋಜನೆ ಜಾರಿಗೊಳಿಸಿದ್ದು, ಅಗತ್ಯವಾದಲ್ಲಿ ಫಲಾನುಭವಿಗಳು ಹೆಚ್ಚಿನ ಹಣ ಹಾಕಿ ಉತ್ತಮ ಮನೆ ಕಟ್ಟಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪರಮೇಶಪ್ಪ ಕುರುವತ್ತಿಗೌಡ್ರ, ಜಿ.ಪಂ.ಸದಸ್ಯ ರಾಜೇಂದ್ರ ಹಾವೇರಣ್ಣವರ, ಕೃಷ್ಣಪ್ಪ (ಹತ್ತಿಮತ್ತೂರ), ತಾ.ಪಂ.ಉಪಾಧ್ಯಕ್ಷೆ ಗಂಗಮ್ಮ ಹಿತ್ತಲಮನಿ, ಎ.ಪಿ.ಎಂ.ಸಿ.ಉಪಾಧ್ಯಕ್ಷ ನಾಗರಾಜ ಬಸೇಗಣ್ಣಿ, ಹಾವೇರಿ ಹಾಗೂ ಸವಣೂರು ತಾ.ಪಂ. ಸದಸ್ಯರು, ಮಾಜಿ ತಾ.ಪಂ.ಅಧ್ಯಕ್ಷ ಚನಬಸಪ್ಪ ಅರಳಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.