ಸವಣೂರು: ವಿದ್ಯಾರ್ಥಿವೇತನ ಬಿಡುಗಡೆ, ಹಾಸ್ಟೆಲ್‍ಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ್ ರವಿಕುಮಾರ ಕೊರವರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ‘ರಾಜ್ಯ ಸರ್ಕಾರ ಸರಿಯಾದ ಹಾಸ್ಟೆಲ್ ವ್ಯವಸ್ಥೆ ಮಾಡದೇ, ವಿದ್ಯಾರ್ಥಿ ವೇತನ ನೀಡದೇ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ 1,258 ಹಾಸ್ಟೆಲ್‍ಗಳಿದ್ದು 1,68,833 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವಾಸವಿದ್ದಾರೆ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 1,972 ವಸತಿ ನಿಲಯಗಳಿದ್ದು 1,87,200 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಉಳಿಯಲು ಅವಕಾಶವಿದೆ. ಆದರೆ ರಾಜ್ಯದಲ್ಲಿ ಹಿಂದಿನ 3 ವರ್ಷಗಳ ಸರ್ಕಾರದ ವರದಿ ಪ್ರಕಾರ ಅರ್ಜಿ ಸಲ್ಲಿಸಿದ 100 ವಿದ್ಯಾರ್ಥಿಗಳಲ್ಲಿ 40 ರಿಂದ 50 ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿದೆ. ಇನ್ನುಳಿದ ವಿದ್ಯಾರ್ಥಿಗಳು, ವಸತಿ ನಿಲಯಗಳಿಂದ ವಂಚಿತರಾಗುತ್ತಿದ್ದಾರೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಹೊಸ ವಸತಿ ನಿಲಯಗಳನ್ನು ಸರ್ಕಾರ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಅರ್ಜಿ ಸಲ್ಲಿಸಿದ ಲಕ್ಷಾಂತರ ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿವೇತನ ಜಮೆಯಾಗದೇ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ, ವಿದ್ಯಾಸಿರಿ, ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗಿಲ್ಲ. ರೈತ ವಿದ್ಯಾನಿಧಿಯನ್ನು ರದ್ದುಗೊಳಿಸಿರುವುದರ ಜೊತೆಗೆ ಇತರ ವಿದ್ಯಾರ್ಥಿ ವೇತನವನ್ನೂ ಸರಿಯಾಗಿ ನೀಡದೇ ವಿದ್ಯಾರ್ಥಿ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಅದನ್ನು ಕೈಬಿಟ್ಟು ತಕ್ಷಣ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿ ವಸತಿ ನಿಲಯಗಳನ್ನು ಸರಿಪಡಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಬಿವಿಪಿ ಪದಾಧಿಕಾರಿಗಳಾದ ವಿನಾಯಕ ಮಿರ್ಜಿ, ನಿರ್ಮಲಾ ಹರಿಜನ, ಶ್ವೇತಾ ತಿಮ್ಮಾಪುರ, ನೇತ್ರಾ ಉಮ್ಮಚಗಿ, ರೇಣುಕಾ ಕೋಟಿ, ಲಕ್ಷ್ಮೀ, ಭುವನೇಶ್ವರಿ ತಳವಾರ, ಸಂಜನಾ ಕಂಬಿಮಠ, ಜ್ಯೋತಿ ಲಮಾಣಿ, ಸಂಗೀತಾ ಹರಿಜನ, ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ಇದ್ದರು.
ಊಟದ ವೆಚ್ಚ ಹೆಚ್ಚಳ ಮಾಡಿ
‘ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ನೀಡುತ್ತಿದ್ದ ಕಿಟ್‍ಗಳು ಸರಿಯಾಗಿ ತಲುಪುತ್ತಿಲ್ಲ. 40-50 ವಿದ್ಯಾರ್ಥಿಗಳಿಗೆ ಸೇರಿ 2-3 ಶೌಚಾಲಯಗಳು ಇವೆ. 100 ವಿದ್ಯಾರ್ಥಿಗಳು ಇರಬೇಕಾದ ವಸತಿ ನಿಲಯಗಳಲ್ಲಿ 140-150 ವಿದ್ಯಾರ್ಥಿಗಳು ಇದ್ದಾರೆ. ಪ್ರತಿ ತಿಂಗಳು ಊಟದ ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಗೆ ₹ 1850 ಮಾತ್ರ ನೀಡಲಾಗುತ್ತಿದೆ. ಈ ಹಣದಲ್ಲಿ ಡಯಟ್ ಚಾರ್ಟ್‍ನಲ್ಲಿ ಇರುವಂತೆ ಸರಿಯಾಗಿ ಆಹಾರ ಪೂರೈಸಲು ಆಗದೇ ಇರುವುದರಿಂದ ಈ ಹಣವನ್ನು ಹೆಚ್ಚಳ ಮಾಡಬೇಕು’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.