ADVERTISEMENT

ಸಾಲ ಮೇಳ ಆಯೋಜನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 14:05 IST
Last Updated 13 ಮಾರ್ಚ್ 2021, 14:05 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಸಭೆ ನಡೆಸಿದರು  
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಸಭೆ ನಡೆಸಿದರು     

ಹಾವೇರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ‘ಸಾಲ ಮೇಳ’ ಆಯೋಜಿಸಿ ಅರ್ಹರಿಗೆ ನೆರವು ಒದಗಿಸಲು ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಸಭೆ ನಡೆಸಿದ ಅವರು, ಸಾಲ ಮೇಳ ಆಯೋಜನೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಒದಗಿಸಿ ಸ್ವಾವಲಂಬಿ ಜೀವನಕ್ಕೆ ಉತ್ತೇಜನ ನೀಡಿ ಎಂದು ತಿಳಿಸಿದರು.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಬಾಕಿ ಇರುವ ನೀರಿನ ಕರ, ವಾಣಿಜ್ಯ ಮಳಿಗೆಗಳ ಬಾಡಿಗೆ, ಜಾಹೀರಾತು ಕರಗಳನ್ನು ವಸೂಲಿ ಮಾಡಲು ಮುಂದಾಗಬೇಕು. ಮಳಿಗೆಗಳ ಬಾಕಿ ಬಾಡಿಗೆ ಪಾವತಿಸಲು ಕಂತಿನಲ್ಲಿ ಅವಕಾಶ ನೀಡಬೇಕು ಎಂದು ಸೂಚಿಸಿದರು.

ADVERTISEMENT

ನಗರ ಪ್ರದೇಶದಲ್ಲಿ ಪರವಾನಗಿ ನವೀಕರಣ ಹಾಗೂ ಲೈಸನ್ಸ್ ನೀಡುವ ಕೆಲಸವನ್ನು ಸೋಮವಾರದಿಂದ ಅಭಿಯಾನದ ರೀತಿಯಲ್ಲಿ ಆಯೋಜಿಸಬೇಕು. ಸ್ಥಳದಲ್ಲಿಯೇ ರಸೀದಿ ನೀಡಲು ಆಯಾ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ವಾಣಿಜ್ಯ ಮಳಿಗೆಗಳ ಪ್ರದೇಶದಲ್ಲಿ ಕೌಂಟರ್ ಸ್ಥಾಪಿಸಿ, ಕಚೇರಿಯನ್ನು ಜನರ ಬಳಿ ತೆಗೆದುಕೊಂಡು ಹೋಗುವ ಕೆಲಸಮಾಡಿ ಎಂದು ಸೂಚನೆ ನೀಡಿದರು.

ಉಳಿತಾಯ ಹಣದಲ್ಲಿ ಸೂಕ್ತ ಕ್ರಿಯಾಯೋಜನೆಗಳನ್ನು ರೂಪಿಸಿ ನಗರದಲ್ಲಿ ಜನರಿಗೆ ಅನುಕೂಲಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಿವಿಧ ಯೋಜನೆಗಳಡಿ ಮಂಜೂರಾದ ಹಣವನ್ನು ನಿಗದಿತ ಅವಧಿಯೊಳಗೆ ವೆಚ್ಚಮಾಡಿ ಗುರಿ ಸಾಧಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.