ADVERTISEMENT

‘ಖಾಟಿಕ್‌‌ ಸಮುದಾಯವನ್ನು ಎಸ್‌.ಸಿ.ಗೆ ಸೇರಿಸಿ’

​ಪ್ರಜಾವಾಣಿ ವಾರ್ತೆ
Published 24 ಮೇ 2022, 15:48 IST
Last Updated 24 ಮೇ 2022, 15:48 IST
ಹಾವೇರಿ ನಗರದ ಬಾಲಕೃಷ್ಣ ಮಹಾರಾಜರ ಆಧ್ಯಾತ್ಮಿಕ ಮಂದಿರದಲ್ಲಿ ಬಾಲಕೃಷ್ಣ ಮಹಾರಾಜರ ಸಾಧನಾ ಸಪ್ತಾಹ ಅಂಗವಾಗಿ ಸೋಮವಾರ ನಡೆದ ಪುಷ್ಪವೃಷ್ಟಿ ಸಮಾರಂಭದಲ್ಲಿ ಶಾಸಕ ನೆಹರು ಓಲೇಕಾರ ಮಾತನಾಡಿದರು
ಹಾವೇರಿ ನಗರದ ಬಾಲಕೃಷ್ಣ ಮಹಾರಾಜರ ಆಧ್ಯಾತ್ಮಿಕ ಮಂದಿರದಲ್ಲಿ ಬಾಲಕೃಷ್ಣ ಮಹಾರಾಜರ ಸಾಧನಾ ಸಪ್ತಾಹ ಅಂಗವಾಗಿ ಸೋಮವಾರ ನಡೆದ ಪುಷ್ಪವೃಷ್ಟಿ ಸಮಾರಂಭದಲ್ಲಿ ಶಾಸಕ ನೆಹರು ಓಲೇಕಾರ ಮಾತನಾಡಿದರು   

ಹಾವೇರಿ: ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಾಗಿ ಬದುಕು ಸಾಗಿಸುತ್ತಿರುವಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ (ಎಸ್‌.ಸಿ) ಸೇರಿಸಬೇಕು ಎಂದು ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ್‌ ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ನಾಗರಾಜ ಜೋರಾಪುರಿ ಅವರು ಶಾಸಕ ನೆಹರು ಓಲೇಕಾರ ಅವರಲ್ಲಿ ಮನವಿ ಮಾಡಿದರು.

ನಗರದ ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮುದಾಯದವರ ಬಾಲಕೃಷ್ಣ ಮಹಾರಾಜರ ಆಧ್ಯಾತ್ಮಿಕ ಮಂದಿರದಲ್ಲಿ ಬಾಲಕೃಷ್ಣ ಮಹಾರಾಜರ ಸಾಧನಾ ಸಪ್ತಾಹ ಅಂಗವಾಗಿ ಪುಷ್ಪವೃಷ್ಟಿ ಸಮಾರಂಭ ಬಾಳು ಮಹಾರಾಜರ ಸಾನ್ನಿಧ್ಯದಲ್ಲಿ ಸೋಮವಾರ ಜರುಗಿತು. ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ ಅವರಿಗೆಸೂರ್ಯನಾರಾಯಣ ಸ್ವಾಮಿ ಮೂರ್ತಿಯನ್ನು ನೀಡಿ, ಕುಲಶಾಸ್ತ್ರೀಯ ಅಧ್ಯಯನದೊಂದಿಗೆ ಮುಖಂಡರು ಮನವಿ ಸಲ್ಲಿಸಿದರು.

‘ಕುರಿ ಮತ್ತು ಮೇಕೆ ಮಾಂಸ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿದ್ದೇವೆ. ರಾಜ್ಯದಲ್ಲಿ ಒಂದೂವರೆ ಲಕ್ಷ ಜನಸಂಖ್ಯೆ ಇದ್ದು, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದೇವೆ. ದೇಶದ 13 ರಾಜ್ಯಗಳಲ್ಲಿ ನಮ್ಮ ಸಮುದಾಯವನ್ನು ಎಸ್‌.ಸಿ.ಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ ಪ್ರವರ್ಗ 1 ಮತ್ತು 2ಎ ನಲ್ಲಿರುವ ನಮ್ಮ ಎಲ್ಲ ಉಪಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕಲಾಲ ಖಾಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಕುರಿತಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಹಾವೇರಿ ಸಮಾಜದ ಅಧ್ಯಕ್ಷ ಸಂಜು ಪಿ. ಕಲಾಲ ಅವರು ಆಧ್ಯಾತ್ಮಿಕ ಮಂದಿರದ ಕಟ್ಟಡ ಪೂರ್ಣಗೊಳಿಸುವ ಬಗ್ಗೆ ಹಾಗೂ ಸಮುದಾಯ ಭವನ ಮಂಜೂರಾತಿ, ಮಟನ್‌ ಮಾರುಕಟ್ಟೆ ಬಗ್ಗೆ ಮತ್ತು ಬಡವರಿಗೆ ನಿವೇಶನ ಮನೆ ಮಂಜೂರು ಮಾಡುವ ಬಗ್ಗೆ ಮನವಿ ಸಲ್ಲಿಸಿದರು.

ಮುಖಂಡರಾದ ಕೃಷ್ಣಾಜಿ ಜಾನ್ವೇಕರ, ಬಸವರಾಜ ಕಲಾಲ, ಮಹಾಂತೇಶ ಜಾನ್ವೇಕರ, ರಮೇಶ ಜಾನ್ವೇಕರ, ಡಾ.ಗುರುರಾಜ ಕಲಾಲ, ಆನಂದ ಕಲಾಲ, ಧರ್ಮರಾಜ ಕಲಾಲ, ಬಾಳಕೃಷ್ಣ ಮಳೇಕರ, ಗಣೇಶ ಕಲಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.