ADVERTISEMENT

ಐಸಿಐಸಿಐ ಬ್ಯಾಂಕಿನಲ್ಲಿ ₹2.36 ಕೋಟಿ ಅವ್ಯವಹಾರ: ಸಹಾಯಕ ವ್ಯವಸ್ಥಾಪಕನ ಬಂಧನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 15:07 IST
Last Updated 24 ಫೆಬ್ರುವರಿ 2023, 15:07 IST
   

ಹಾವೇರಿ: ನಗರದ ವಿದ್ಯಾನಗರದ ಹಳೇ ಪಿ.ಬಿ. ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕಿನಲ್ಲಿ ₹2.36 ಕೋಟಿ ಅವ್ಯವಹಾರವಾಗಿದ್ದು, ಬ್ಯಾಂಕಿನ ಸಹಾಯಕ ವ್ಯವಸ್ಥಾಪಕನ ವಿರುದ್ಧ ಹಾವೇರಿ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಸಿಐಸಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಆಗಿದ್ದ ವೀರೇಶ ಕಾಶಿಮಠ ಹಣ ದುರ್ಬಳಕೆ ಮಾಡಿಕೊಂಡ ಆರೋಪಿ. ಗ್ರಾಹಕರು ಠೇವಣಿ ಇಟ್ಟಿದ್ದ ಹಣವನ್ನು ತನ್ನ ಸ್ನೇಹಿತನ ಬ್ಯಾಂಕ್ ಖಾತೆಗೆ 20-8-2022ರಿಂದ ಇಲ್ಲಿಯವರೆಗೆ ಹಂತಹಂತವಾಗಿ ಒಟ್ಟು ₹2.36 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ನಂತರ ಆ ಹಣ ಬಳಸಿಕೊಂಡು ಆನ್‍ಲೈನ್ ಗೇಮ್ ಆಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಕೋಟ್ಯಂತರ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಬ್ಯಾಂಕ್ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ದೂರು ದಾಖಲಿಸಿಕೊಂಡು ಆರೋಪಿ ವೀರೇಶ ಕಾಶಿಮಠನನ್ನು ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಸಿಐಡಿ ತನಿಖೆ:

‘ಬ್ಯಾಂಕ್ ಹಣ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಐಸಿಐಸಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಆಗಿದ್ದ ವೀರೇಶ ಕಾಶಿಮಠ ಎಂಬವರನ್ನು ಬಂಧಿಸಲಾಗಿದೆ. ₹2 ಕೋಟಿ ಮೇಲ್ಪಟ್ಟ ಪ್ರಕರಣವಾದ್ದರಿಂದ ಇದನ್ನು ಸಿಐಡಿ ತನಿಖೆ ಮಾಡುತ್ತದೆ. ಒಂದೆರಡು ದಿನಗಳಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.