ADVERTISEMENT

ಸಿಎಂ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಲು ಬಿಜೆಪಿ ಶಾಸಕ ಓಲೇಕಾರ ನಿರ್ಧಾರ

ಕೆಲವು ನಾಯಕರ ಕೈವಾಡದಿಂದ ಶಿಷ್ಟಾಚಾರ ಉಲ್ಲಂಘನೆ: ಶಾಸಕ ನೆಹರು ಓಲೇಕಾರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 13:38 IST
Last Updated 20 ಆಗಸ್ಟ್ 2022, 13:38 IST
ಹಾವೇರಿ ನಗರದ ಪ್ರವಾಸಿ ಮಂದಿರದ ಮುಂಭಾಗ ಶನಿವಾರ ಶಾಸಕ ನೆಹರು ಓಲೇಕಾರ ಮತ್ತು ಬಿಜೆಪಿ ಕಾರ್ಯಕರ್ತರು ಕಪ್ಪುಬಟ್ಟೆ ಹಿಡಿದು ನಿಂತಿದ್ದ ದೃಶ್ಯ  
ಹಾವೇರಿ ನಗರದ ಪ್ರವಾಸಿ ಮಂದಿರದ ಮುಂಭಾಗ ಶನಿವಾರ ಶಾಸಕ ನೆಹರು ಓಲೇಕಾರ ಮತ್ತು ಬಿಜೆಪಿ ಕಾರ್ಯಕರ್ತರು ಕಪ್ಪುಬಟ್ಟೆ ಹಿಡಿದು ನಿಂತಿದ್ದ ದೃಶ್ಯ     

ಹಾವೇರಿ: ನಗರದಲ್ಲಿ ನಾಳೆ (ಆ.21) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿರುವ ಕಾರ್ಯಕ್ರಮದ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಲು ಸ್ವತಃ ಬಿಜೆಪಿ ಶಾಸಕ ನೆಹರು ಓಲೇಕಾರ ಮುಂದಾಗಿದ್ದಾರೆ.

ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಸಿಎಂ ನೆರವೇರಿಸಲಿದ್ದು, ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕ ನೆಹರು ಓಲೇಕಾರ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಲಾಗಿದೆ.

ಶಾಸಕ ನೆಹರು ಓಲೇಕಾರ ಮಾಧ್ಯಮದವರೊಂದಿಗೆ ಮಾತನಾಡಿ,‘ವಕೀಲರ ಸಂಘದ ಕಚೇರಿಗೆ ₹7.5 ಕೋಟಿ ಅನುದಾನ ಮಂಜೂರು ಮಾಡಿಸಿದ್ದೆ. ನನ್ನನ್ನು ಕಡೆಗಣಿಸಿ ಸಮಾರಂಭ ಏರ್ಪಡಿಸಿರುವುದು ಅಕ್ಷಮ್ಯ ಅಪರಾಧ.ಕಾರ್ಯಕ್ರಮದ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಮೂಲಕ ಕಾರ್ಯಕರ್ತರು ವಿಷಾದ ವ್ಯಕ್ತಪಡಿಸಲಿದ್ದಾರೆ’ ಎಂದರು.

ADVERTISEMENT

‘ಇದು ಸರ್ಕಾರದ ವಿರುದ್ಧ ಪ್ರತಿಭಟನೆ.ಉದ್ದೇಶಪೂರ್ವಕವಾಗಿ ನನ್ನ ಹೆಸರು ಬಿಟ್ಟಿದ್ದಾರೆ. ಸಮಾರಂಭದಲ್ಲಿ ಶಿಷ್ಟಾಚಾರ ಯಾಕೆ ಪಾಲಿಸಿಲ್ಲ? ಅಂತ ಕೇಳಿದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಂದಿಲ್ಲ. ಇದರಲ್ಲಿ ಕೆಲವು ನಾಯಕರ ಕೈವಾಡ ಇರಬಹುದು. ಯಾರು ಅಂತ ಹೊರತೆಗೆಯುತ್ತೇನೆ. ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಕೂಡಾ ಮಾಡುತ್ತೇನೆ’ ಎಂದು ಕಿಡಿಕಾರಿದರು.

‘ನಾನು ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಶಾಸಕನಾಗಿದ್ದರೂ ಕೆಲಸ ಮಾಡುವೆ. ಕಡೆಗಣನೆಯಿಂದ ನಮಗೇ ಒಳ್ಳೆಯದು. ಶಾಸಕನನ್ನು ಬಿಟ್ಟು ಕಾರ್ಯಕ್ರಮ ಮಾಡಿದ ಅಪಕೀರ್ತಿ ಅವರಿಗೆ ಬರುತ್ತದೆ. ನಿನ್ನೆ ಸಿಎಂ ಮನೆಗೆ ಹೋಗಿ ಭೇಟಿಯಾಗಿ ಮಾತಾಡಿ ಬಂದಿದ್ದೆ. ಪ್ರತಿಭಟನೆ ಯಾರಿದ್ರೂ ಮಾಡೋದೇ, ಸರ್ಕಾರ ವಿಚಾರ ಮಾಡಬೇಕಿತ್ತು’ ಎಂದು ಬೇಸರ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.