ADVERTISEMENT

‘ಜನರ ಕಷ್ಟಕ್ಕೆ ಸ್ಪಂದಿಸದ ಬಿಜೆಪಿ’

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:42 IST
Last Updated 26 ಅಕ್ಟೋಬರ್ 2021, 3:42 IST
ಗೆಜ್ಜಿಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿದರು
ಗೆಜ್ಜಿಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿದರು   

ಹಾನಗಲ್: ತ್ಯಾಗ, ಬಲಿದಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಮೊದಲಿನಿಂದಲೂ ಜನರ ಸಂಕಷ್ಟಕ್ಕೆ ಸ್ಪಂದಿಸಿದೆ. ಜನಕಲ್ಯಾಣಕ್ಕೆ ಸಾಕಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದೆ. ಸುಳ್ಳು ಹೇಳಿ ಅಧಿಕಾರ ಗಿಟ್ಟಿಸಿರುವ ಬಿಜೆಪಿಯಿಂದ ನೆಮ್ಮದಿ ಸಿಗುವುದಿಲ್ಲ ಎನ್ನುವ ಭಾವನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಹಾನಗಲ್ ಕ್ಷೇತ್ರದ ಗೆಜ್ಜಿಹಳ್ಳಿ, ಹಾವಣಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಮತಯಾಚಿಸಿ ಮಾತನಾಡಿದರು. ಹಾನಗಲ್ ತಾಲ್ಲೂಕಿನ ಜನ ಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಆಡಳಿತದಲ್ಲಿರುವ ಯಾರೊಬ್ಬರೂ ಇತ್ತ ತಿರುಗಿಯೂ ಸಹ ನೋಡಲಿಲ್ಲ. ಕ್ಷೇತ್ರದತ್ತ ತಲೆ ಹಾಕಿಯೂ ಮಲಗಲಿಲ್ಲ. ಕೊರೊನಾ ಸಮಯದಲ್ಲಿ ಜನ ನರಳಾಡುತ್ತಿದ್ದಾಗ ಬಿಜೆಪಿ ನಾಯಕರು ಸಾವಿಗೆ ಅಂಜಿ ಮನೆ ಬಾಗಿಲು ಹಾಕಿಕೊಂಡು ಕುಳಿತಿದ್ದರು. ಆಗ ನೆರವಾಗಿದ್ದು ಶ್ರೀನಿವಾಸ್ ಮಾನೆ.

ಮಾನೆ ಸಾವಿಗೆ ಹೆದರದೆ ಯುವಕರನ್ನು ಕಟ್ಟಿಕೊಂಡು ಜನರ ರಕ್ಷಣೆಗೆ ಮುಂದಾಗಿದ್ದನ್ನು ಜನ ಮರೆತಿಲ್ಲ. ಜನರಲ್ಲಿ ಮಾನವೀಯತೆ ಇಂದಿಗೂ ಸಹ ಬದುಕಿದೆ. ಕುತಂತ್ರದಿಂದ ಜನರಿಗೆ ಮೋಸ ಮಾಡುತ್ತೇವೆ ಎನ್ನುವ ಭ್ರಮೆಯಿಂದ ಬಿಜೆಪಿ ನಾಯಕರು ಹೊರಬರಬೇಕಿದೆ. ಕ್ಷೇತ್ರದ ಜನರ ವಿಶ್ವಾಸ ಗಳಿಸಿರುವ ಶ್ರೀನಿವಾಸ್ ಮಾನೆ ಹೆಚ್ಚು ಮತಗಳ ಅಂತರದಿಂದ ವಿಜಯ ಸಾಧಿಸಲಿದ್ದಾರೆ ಎಂದರು.

ADVERTISEMENT

ಮಾಜಿ ಸಚಿವ ಬಸವರಾಜ್ ಶಿವಣ್ಣನವರ ಮಾತನಾಡಿ, ಕ್ಷೇತ್ರದ ತುಂಬ ಒಂದು ಸುತ್ತು ಹಾಕಿ ಬಂದರೆ ಶ್ರೀನಿವಾಸ್ ಮಾನೆ ಜನಪ್ರಿಯತೆ ಅರಿವಿಗೆ ಬರಲಿದೆ. ಬಿಜೆಪಿ ನಾಯಕರು ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಜನ ಶ್ರೀನಿವಾಸ್ ಮಾನೆ ಅವರ ಬಗೆಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಅವರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ. ಜನ ಈಗಾಗಲೇ ನಿರ್ಣಯ ಕೈಗೊಂಡಿದ್ದು, ಮಾನೆ ಗೆಲ್ಲಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.