ADVERTISEMENT

ಶುದ್ಧ ನೀರಿನ ಘಟಕ ಯೋಜನೆಗೆ ಅಪ್ಪ ಇಲ್ಲ, ಅಮ್ಮ ಇಲ್ಲ: ಸಚಿವ ಬೊಮ್ಮಾಯಿ ಬೇಸರ

ಶೇ 45ರಷ್ಟು ಶುದ್ಧ ನೀರಿನ ಘಟಕಗಳು ಸ್ಥಗಿತ: ಸಚಿವ ಬೊಮ್ಮಾಯಿ ಬೇಸರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 16:29 IST
Last Updated 6 ಮಾರ್ಚ್ 2021, 16:29 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಮಾಹಿತಿ ನೀಡಿದರು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಮಾಹಿತಿ ನೀಡಿದರು    

ಹಾವೇರಿ: ‘ಜಿಲ್ಲೆಯಲ್ಲಿ ಶೇ 45ರಷ್ಟು ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿ ಜಿಲ್ಲಾ ಪಂಚಾಯಿತಿ ಕೈತೊಳೆದುಕೊಂಡಿತು. ಇದರ ತಾಂತ್ರಿಕತೆ ಕೂಡ ಪ್ರಶ್ನಾರ್ಥಕವಾಗಿದೆ. ಹೀಗಾಗಿ ಈ ಯೋಜನೆಗೆ ಅಪ್ಪ ಇಲ್ಲ, ಅಮ್ಮ ಇಲ್ಲದಂತಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ತೀವ್ರ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿ, ‘ಶುದ್ಧ ನೀರಿನ ಘಟಕಗಳಲ್ಲಿ ಶೇ 60ರಷ್ಟು ನೀರು ಅಪವ್ಯಯವಾಗುತ್ತಿದೆ. ನೀರಿನಂತೆ ಜನರ ತೆರಿಗೆ ಹಣ ಕೂಡ ಪೋಲಾಗುತ್ತಿದೆ. ಈ ಘಟಕಗಳು ಏಕೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ನಿಖರ ಸಮೀಕ್ಷೆ ನಡೆಸಬೇಕು. ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಅಂಥ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸಿಇಒ ಅವರಿಗೆ ಸಚಿವರು ತಾಕೀತು ಮಾಡಿದರು.

ಮಾನವ ದಿನ ಹೆಚ್ಚಿಸಿ

ADVERTISEMENT

ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ಹಾವೇರಿ ತಾಲ್ಲೂಕಿನಲ್ಲಿ ಶೇ 44, ರಾಣೆಬೆನ್ನೂರು ತಾಲ್ಲೂಕಿನಲ್ಲಿ ಶೇ 56 ಹಾಗೂ ಶಿಗ್ಗಾವಿ–ಸವಣೂರು ತಾಲ್ಲೂಕಿನಲ್ಲಿ ಶೇ 61ರಷ್ಟು ಸಾಧನೆಯಾಗಿದೆ. ಈ ಮೂರು ತಾಲ್ಲೂಕುಗಳಲ್ಲಿ ಮಾನವ ದಿನಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ನರೇಗಾದಿಂದ ಎಷ್ಟು ನೈಸರ್ಗಿಕ ಸಂಪನ್ಮೂಲ ಸೃಷ್ಟಿಯಾಗಿದೆ ಎಂಬುದರ ಮೌಲ್ಯಮಾಪನ ಮಾಡಿ ವರದಿ ಕೊಡಬೇಕು ಎಂದು ಸಿಇಒಗೆ ಸಚಿವರು ಸೂಚಿಸಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ,ನರೇಗಾದಡಿ ಅಂಗನವಾಡಿ, ಶಾಲಾ–ಕಾಲೇಜುಗಳಿಗೆ ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು. ಶಾಲೆ ಆರಂಭವಾಗುವುದರೊಳಗೆ ಪ್ರತಿ ಯುನಿಟ್‌ಗೆ ಎಷ್ಟು ವೆಚ್ಚ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

ಡಿಡಿಪಿಐಗೆ ನೋಟಿಸ್‌

ನರೇಗಾ ಯೋಜನೆಯಡಿ 2020–21ನೇ ಸಾಲಿನಲ್ಲಿ ₹82 ಲಕ್ಷ ವೆಚ್ಚದಲ್ಲಿ ಒಟ್ಟು 55 ಶಾಲಾ ಅಡುಗೆ ಕೋಣೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆದರೆ ಇದುವರೆಗೆ ಕಾಮಗಾರಿಯೇ ಆರಂಭವಾಗಿಲ್ಲ ಎಂಬ ಬಗ್ಗೆ ಮಾಹಿತಿ ತಿಳಿದ ಸಚಿವ ಬೊಮ್ಮಾಯಿ ಅವರು, ಡಿಡಿಪಿಐ ಅಂದಾನಪ್ಪ ವಡಗೇರಿ ಅವರನ್ನು ಆಡಳಿತಾತ್ಮಕ ಅನುಮೋದನೆ ಸಿಕ್ಕಿ, ಅನುದಾನ ಬಿಡುಗಡೆಯಾಗಿದ್ದರೂ ಏಕೆ ವಿಳಂಬ ಧೋರಣೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ನಂತರ ಡಿಡಿಪಿಐ ಅವರಿಗೆ ನೋಟಿಸ್‌ ನೀಡಿ, ಶಿಸ್ತುಕ್ರಮ ಕೈಗೊಳ್ಳಿ ಎಂದು ಸಿಇಒಗೆ ಸೂಚನೆ ನೀಡಿದರು.

ಬಸ್ ವ್ಯವಸ್ಥೆ

ಈಗಾಗಲೇ ಶಾಲಾ– ಕಾಲೇಜುಗಳು ಆರಂಭಗೊಂಡಿವೆ. ಎಂದಿನಂತೆ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಸೋಮವಾರದಿಂದಲೇ ಸಾರಿಗೆ ಸಂಸ್ಥೆಯ ಬಸ್‌ ಸೌಲಭ್ಯ ಕಲ್ಪಿಸುವಂತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಚಿವರು ಸೂಚನೆ ನೀಡಿದರು.

ಎಂಜಿನಿಯರ್‌ಗಳ ವಿರುದ್ಧ ಸಚಿವ ಗರಂ

ತಾಲ್ಲೂಕುವಾರು ಎಷ್ಟು ರಸ್ತೆಗಳಿವೆ? ಅವುಗಳ ಉದ್ದ ಎಷ್ಟು? ಎಂಬ ಸಾಮಾನ್ಯ ಮಾಹಿತಿ ಇಲ್ಲದೆ ಕೆಡಿಪಿ ಸಭೆಗೆ ಏಕೆ ಬಂದಿದ್ದೀರಿ. ಸಭೆಗೆ ಸಿದ್ಧತೆ ಮಾಡಿಕೊಳ್ಳದೆ ಬೇಜವಾಬ್ದಾರಿತನ ತೋರುತ್ತಿದ್ದೀರಿ ಎಂದು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಿರುದ್ಧ ಹರಿಹಾಯ್ದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ನೀಡುತ್ತಿರುವ ಮಾಹಿತಿಗೂ, ವಾಸ್ತವಕ್ಕೂ ತಾಳಮೇಳವಿಲ್ಲ. ಎರಡೆರಡು ಗುರಿ ನಿಗದಿಪಡಿಸಿಕೊಂಡು ಸುಳ್ಳು ಅಂಕಿಅಂಶ ಒಪ್ಪಿಸುತ್ತಿದ್ದೀರಿ ಎಂದು ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರನ್ನೂ ತರಾಟೆಗೆ ತೆಗೆದುಕೊಂಡರು.

ಸಭೆ ಬೇಸರ ತಂದಿದೆ: ಬೊಮ್ಮಾಯಿ

ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಗತಿ ಪರಿಶೀಲನಾ ಸಭೆ ಬೇಸರ ತಂದಿದೆ. ಬಹಳ ಅಧಿಕಾರಿಗಳಿಗೆ ಇಲಾಖೆಯ ಮಾಹಿತಿ ಗೊತ್ತಿಲ್ಲ. ಈ ರೀತಿಯ ಕೆಲಸ ನಾನು ಇಷ್ಟಪಡುವುದಿಲ್ಲ. ಗಂಭೀರವಾಗಿ ಕೆಲಸದಲ್ಲಿ ತೊಡಗಬೇಕು. ರಾಜ್ಯ ಮತ್ತು ಕೇಂದ್ರ ವಲಯದ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು. ಯಾವ ಯೋಜನೆಗಳು ಯಾವ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಆ ವರ್ಗಕ್ಕೆ ತಲುಪಿಸುವ ಪ್ರಾಮಾಣಿಕ ಹಾಗೂ ಆತ್ಮಸಾಕ್ಷಿಯಿಂದ ಎಲ್ಲರೂ ಕೆಲಸ ಮಾಡಬೇಕು. ಮುಂದಿನ ಮೂರು ತಿಂಗಳಲ್ಲಿ ಆಡಳಿತದಲ್ಲಿ ಗುಣಾತ್ಮಕ ಬದಲಾವಣೆಯಾಗಬೇಕು. ಶಿಸ್ತು ಮೂಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.