ಬ್ಯಾಡಗಿ: ಪಟ್ಟಣದಲ್ಲಿ ರಾಜ್ಯ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ನಂಜುಂಡಸ್ವಾಮಿ ಜನ್ಮ ದಿನದ ಅಂಗವಾಗಿ ಮೈಕ್ರೊ ಫೈನಾನ್ಸ್‌ಗಳ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ‘ಬಡವರು, ರೈತರು, ಕೂಲಿ ಕಾರ್ಮಿಕರು, ಶೋಷಿತರನ್ನು ರಕ್ಷಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮೈಕ್ರೊಫೈನಾನ್ಸ್‌ಗಳು ಸಾಲ ಪಡೆದ ರೈತ ಮಹಿಳೆಯರ ಮನೆಗೆ ಕಾಲಿಟ್ಟರೆ, ನಾವೂ ಬಲಪ್ರಯೋಗಕ್ಕೆ ಮುಂದಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಅನಧಿಕೃತ ಫೈನಾನ್ಸ್ ಕಂಪನಿಗಳು ಗುಂಡಾಗಳ ಮೂಲಕ ದಬ್ಬಾಳಿಕೆ ನಡೆಸಿ, ಬಡ್ಡಿ ವಸೂಲಿ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಿಗೆ ಆರ್‌ಬಿಐ ನಿಯಮದಲ್ಲಿ ಅವಕಾಶ ಇದೆಯೇ? ಸಾಲ ಪಡೆದವರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಬೆಳೆಗೆ ಬೆಂಬಲಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಹಣ ವಸೂಲಿಗಾಗಿ ದಬ್ಬಾಳಿಕೆ ಮಾಡಿದಲ್ಲಿ, ನಾವು ರೈತರ ಪರ ನಿಲ್ಲುತ್ತೇವೆ. ರೈತ ಸಂಘದ ವತಿಯಿಂದ ಚಳವಳಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ರೈತ ಸಂಘದ ತಾಲ್ಲೂಕು ಘಟದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.