ಬ್ಯಾಡಗಿ: ಧಾರವಾಡ ಕೃಷಿ ಮೇಳದಲ್ಲಿ ಪ್ರದರ್ಶಿಸಲಾಗಿದ್ದ ಮೂರು ವರ್ಷಕ್ಕೆ ಫಲ ನೀಡುವ ತೆಂಗು ಬೆಳೆಯಿಂದ ಪ್ರಭಾವಿತರಾದ ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಮೌನೇಶ ಕುಡಪಲಿ ತಮ್ಮ 5 ಎಕರೆ ಜಮೀನಿನಲ್ಲಿ 313 ತೆಂಗಿನ ಗಿಡಗಳನ್ನು ಬೆಳೆದು ಯಶ ಕಂಡಿದ್ದಾರೆ.
ಕಾರವಾರ ಮತ್ತು ಗೋವಾದಿಂದ ಸಸಿಗಳನ್ನು ತಂದು ನಾಟಿ ಮಾಡಿದ್ದು, ಈಗ ಅವು ಉತ್ತಮ ಫಸಲು ನೀಡುತ್ತಿವೆ. ಅದರಲ್ಲಿ 16 ಸಾವಿರ ಔಷಧೀಯ ಸಸ್ಯವಾದ ಸಲೇಶಿಯಾ, 900 ಮಹಾಗನಿ, 10 ಪೇರಲ, 10 ನೇರಲುಹಣ್ಣಿನ ಗಿಡ, ಮೆಣಸಿನಕಾಯಿ, 500 ಶ್ರೀಗಂಧ, ತಾಳೆ, ಅಡಿಕೆ ಹಾಗೂ ತರಕಾರಿಗಳಾದ ಹಾಗಲ, ಹಿರೇಕಾಯಿ, ಟೊಮೆಟೊ ಮುಂತಾದವುಗಳನ್ನು ಬೆಳೆದು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ (ಬಿಎಎಂಎಸ್) ವೈದ್ಯರಾಗಿದ್ದರೂ, ಪ್ರವೃತ್ತಿಯಲ್ಲಿ ಕೃಷಿಕರಾಗಿ ಕೆಲಸ ನಿರ್ವಹಿಸುತ್ತಿರುವ ಅವರು 5 ಎಕರೆ ಜಮೀನಿನಲ್ಲಿ ಸಮಗ್ರ ಬೆಳೆ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. 20X20ಅಡಿ ಅಳತೆಯಲ್ಲಿ 313 ತೆಂಗಿನ ಗಿಡ, 3X3ಅಡಿ ಅಳತೆಯಲ್ಲಿ 16 ಸಾವಿರ ಸಲೇಶಿಯಾ ಔಷಧೀಯ ಸಸ್ಯವನ್ನು ನಾಟಿ ಮಾಡಿದ್ದಾರೆ. ತೆಂಗಿನ ಗಿಡಗಳಿಂದ ಮಾಸಿಕ ₹ 50 ಸಾವಿರ ಆದಾಯ ಬರುತ್ತಿದೆ. ಔಷಧೀಯ ಸಸ್ಯ ಸಲೇಶಿಯಾದ ಬೇರು ಮತ್ತು ಕಾಂಡವನ್ನು ಮಾರಾಟ ಮಾಡಿದ್ದು, ಖರ್ಚು ತೆಗೆದು ಸುಮಾರು ₹ 7 ಲಕ್ಷ ಆದಾಯ ಬಂದಿದೆ ಎಂದು ಮೌನೇಶ ಹೇಳಿದರು.
ಹೇರಳವಾಗಿ ಆಮ್ಲಜನಕ ನೀಡುವ 900 ಮಹಾಗನಿ ಗಿಡಗಳನ್ನು ಬೆಳೆಯಲಾಗಿದೆ. ಇವುಗಳ ಮಧ್ಯದಲ್ಲಿ 25 ಕ್ವಿಂಟಲ್ ಮೆಣಸಿನಕಾಯಿ, 200 ಕ್ವಿಂಟಲ್ ಅರಿಸಿಣ, 150 ನುಗ್ಗೆ ಗಿಡ ಬೆಳೆದು ಉತ್ತಮ ಆದಾಯ ಪಡೆದಿದ್ದಾರೆ.
ದಿನಚರಿ: ಬೆಳಿಗ್ಗೆ 6ರಿಂದ 8ರವರೆಗೆ ಹೊಲದಲ್ಲಿದ್ದು, ಬಳಿಕ ವೈದ್ಯ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಹೊಲದಲ್ಲಿದ್ದಾಗ ಕಾರ್ಮಿಕರೊಂದಿಗೆ ಇವರೂ ಕೈಜೋಡಿಸಿ ಕೆಲಸ ಮಾಡುತ್ತಾರೆ. ಕಳೆದ ವರ್ಷ ತಾಲ್ಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಏಕ ಬೆಳೆ ಪದ್ಧತಿಗಿಂತ ಸಮಗ್ರ ಕೃಷಿ ಅನುಕೂಲಕಕರ ಮತ್ತು ಲಾಭದಾಯಕ. ಹೀಗಾಗಿ ಹೈನುಗಾರಿಕೆಯನ್ನು ಕೂಡ ಅಳವಡಿಸಿಕೊಂಡಿದ್ದು, ಪಂಜಾಬಿ ತಳಿಯ 6 ಆಕಳುಗಳನ್ನು ಸಾಕಿದ್ದಾರೆ. ಅವು ದಿನಕ್ಕೆ 20 ಲೀಟರ್‌ನಂತೆ ಹಾಲು ನೀಡುತ್ತಿವೆ. ಇದರಿಂದಲೂ ಉತ್ತಮ ಆದಾಯ ದೊರೆಯುತ್ತಿದೆ’ ಎಂದು ಮೌನೇಶ ಕುಡಪಲಿ ಹೇಳಿದರು.
‘ಜಮೀನಿನ ಮಣ್ಣಿಗೆ ಸರಿಹೊಂದುವ ಕೃಷಿಯನ್ನೇ ಮಾಡಬೇಕು. ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಮಣ್ಣು ಪರೀಕ್ಷೆ ಅಗತ್ಯ’ ಎಂದು ಮೌನೇಶ ಕುಡಪಲಿ ತಿಳಿಸಿದ್ದಾರೆ.
ಸಂಪೂರ್ಣ ಸಾವಯವ
ಯಾವುದೇ ರಾಸಾಯನಿಕ ಗೊಬ್ಬರವನ್ನು ಕೃಷಿಯಲ್ಲಿ ಬಳಸುವುದಿಲ್ಲ. ಸಂಪೂರ್ಣ ಸಾವಯವ ಪದ್ಧತಿ ಅಳವಡಿಸಕೊಂಡಿದ್ದಾರೆ. ಜೀವಾಮೃತ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಗೋಮೂತ್ರದೊಂದಿಗೆ 1 ಕೆ.ಜಿ ಹಸಿ ಕಡಲೆ ಹಿಟ್ಟು 1 ಕೆ.ಜಿ ಬೆಲ್ಲ 1 ಲೀ ಮಜ್ಜಿಗೆ ಅದರೊಂದಿಗೆ 1 ಕೆ.ಜಿ ಮಣ್ಣನ್ನು ಬೆರೆಸಿ ಐದು ದಿನಗಳವರೆಗೆ ಸಂಗ್ರಹಿಸಿ ಇಡಲಾಗುತ್ತದೆ. ಹೀಗೆ ತಯಾರಿಸಿದ ಜೀವಾಮೃತವನ್ನು ಹೊಲಗಳಿಗೆ ಜೆಟರ್ ಮೂಲಕ ಸಿಂಪರಣೆ ಮಾಡಲಾಗುತ್ತದೆ. ಒಟ್ಟು 3 ಕೊಳವೆ ಭಾವಿಗಳಿದ್ದು ಸ್ಪ್ರಿಂಕ್ಲರ್ ಮೂಲಕವೇ ನೀರುಣಿಸಲಾಗುತ್ತಿದೆ. ಇಲ್ಲಿಯ ಗಿಡಗಳಿಗೆ ಸಗಣಿ ಗೊಬ್ಬರ ಹಾಗೂ ಎರೆಹುಳು ಗೊಬ್ಬರವನ್ನು ಯಥೇಚ್ಛವಾಗಿ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.