ADVERTISEMENT

ಹಾವೇರಿ | ಮಹಿಳೆಯರಿಂದ ಸಂಭ್ರಮದ ಗಂಗಾಪೂಜೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 11:02 IST
Last Updated 25 ಜುಲೈ 2020, 11:02 IST
ನಾಗರ ಪಂಚಮಿ ಪ್ರಯುಕ್ತ ಹಾವೇರಿ ತಾಲ್ಲೂಕು ಸಮೀಪದ ವರದಾ ನದಿಯಲ್ಲಿ ಮಹಿಳೆಯರು ಶನಿವಾರ ಶ್ರದ್ಧಾಭಕ್ತಿಯಿಂದ ಗಂಗಾಪೂಜೆ ನೆರೆವೇರಿಸಿದರು  –ಪ್ರಜಾವಾಣಿ ಚಿತ್ರ 
ನಾಗರ ಪಂಚಮಿ ಪ್ರಯುಕ್ತ ಹಾವೇರಿ ತಾಲ್ಲೂಕು ಸಮೀಪದ ವರದಾ ನದಿಯಲ್ಲಿ ಮಹಿಳೆಯರು ಶನಿವಾರ ಶ್ರದ್ಧಾಭಕ್ತಿಯಿಂದ ಗಂಗಾಪೂಜೆ ನೆರೆವೇರಿಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ನಾಗರ ಪಂಚಮಿಯ ಮೂರನೇ ದಿನವಾದ ಶನಿವಾರ ‘ನಾಗಚತುರ್ಥಿ’ ದಿನದಂದು ಜಿಲ್ಲೆಯಾದ್ಯಂತ ಮಹಿಳೆಯರು ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳಲ್ಲಿ ಗಂಗಾಪೂಜೆ ನೆರವೇರಿಸಿದರು.

ಕೊರೊನಾ ಸೋಂಕಿನ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಸರಳವಾಗಿ ನಾಗರ ಪಂಚಮಿಯನ್ನು ಜನರು ಆಚರಿಸಿದರು. ಗುರುವಾರ ‘ರೊಟ್ಟಿ ಪಂಚಮಿ ಮತ್ತು ಶುಕ್ರವಾರ ‘ನಾಗಪಂಚಮಿ‘ ಆಚರಿಸಿದ್ದರು. ಶನಿವಾರ ನಾಗಚತುರ್ಥಿ ಅಂಗವಾಗಿ ಮನೆಯಲ್ಲಿ ಮಣ್ಣು ಅಥವಾ ಬೆಳ್ಳಿಯ ನಾಗಪ್ಪನ ಮೂರ್ತಿಗಳನ್ನು ದೇವರ ಕೋಣೆಗಳಲ್ಲಿಟ್ಟು ಶ್ರದ್ಧಾಭಕ್ತಿಯಿಂದ ಪೂಜಿಸಿದರು.

ಮಹಿಳೆಯರು ಹತ್ತಿರದ ನದಿ ಮತ್ತು ಕೆರೆಗಳಿಗೆ ಹೋಗಿ ಕುಂಭ ಇಟ್ಟು, ಹೂ, ಕುಂಕುಮ ಭಂಡಾರಗಳಿಂದ ಭಕ್ತಿಯಿಂದ ಪೂಜಿಸಿದರು. ನಂತರ ಕುಂಭದ ನೀರನ್ನು ನದಿ ಮತ್ತು ಕೆರೆಗಳಿಗೆ ಅರ್ಪಿಸಿದರು. ಕೆಲವರು ನಾಗರಕಲ್ಲುಗಳಿಗೆ ಹಾಲೆರೆದು, ಪೂಜೆ ಸಲ್ಲಿಸಿ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಬೇಡಿಕೊಂಡರು. ತವರು ಮನೆ ಮತ್ತು ಗಂಡನ ಮನೆಯನ್ನು ನಾಗಪ್ಪ ಕಾಪಾಡಲಿ ಎಂದು ಮಹಿಳೆಯರು ಆರಾಧಿಸಿದರು.

ADVERTISEMENT

ಮಕ್ಕಳು, ಯುವಕರು ಮತ್ತು ಯುವತಿಯರು ಹೊಸಬಟ್ಟೆ ಧರಿಸಿ, ಜೋಕಾಲಿ, ಕಣ್ಣಾಮುಚ್ಚಾಲೆ, ನಿಂಬೆಹಣ್ಣಿನ ಓಟ, ಗೋಲಿಗುಂಡ ಮುಂತಾದ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಸಂಭ್ರಮಿಸಿದರು. ಮನೆಯಲ್ಲಿ ಕರಿಗಡುಬು, ಕಾಳಿನ ಪಲ್ಯ, ಶ್ಯಾವಿಗೆ ಪಾಯಸ, ತರಹೇವಾರಿ ಉಂಡಿ ಮುಂತಾದ ಸಿಹಿ ಖಾದ್ಯಗಳನ್ನು ಮಾಡಿ ಕುಂಟುಬಸ್ಥರೆಲ್ಲ ಒಟ್ಟಾಗಿ ಊಟ ಮಾಡಿ, ಸಂಭ್ರಮದ ಕ್ಷಣಗಳನ್ನು ಕಳೆದರು. ಜತೆಗೆ ಉಂಡಿಗಳನ್ನು ನೆರೆಹೊರೆಯವರಿಗೆ ವಿನಿಮಯ ಮಾಡಿಕೊಂಡು, ಹಬ್ಬದ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.