ADVERTISEMENT

ಹಾವೇರಿಯ ಹದಗೆಟ್ಟ ರಸ್ತೆಗಳಲ್ಲಿ ಸಂಚಾರ ಸರ್ಕಸ್‌!

ಜಿಲ್ಲೆಯ ಹೆದ್ದಾರಿಗಳಲ್ಲಿ ಗುಂಡಿಗಳ ಕಾರುಬಾರು:ಕೆಸರುಗದ್ದೆಯಂಥ ಹಾದಿಯಲ್ಲಿ ಚಾಲಕರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 5:05 IST
Last Updated 19 ಅಕ್ಟೋಬರ್ 2020, 5:05 IST
ಶಿಗ್ಗಾವಿ ನಗರದ ಹೊಸ ಬಸ್‌ ನಿಲ್ದಾಣ ಹತ್ತಿರದ ಸರ್ವೀಸ್‌ ರಸ್ತೆಯಲ್ಲಿ ನಿಂತಿರುವ ಮಳೆ ನೀರು
ಶಿಗ್ಗಾವಿ ನಗರದ ಹೊಸ ಬಸ್‌ ನಿಲ್ದಾಣ ಹತ್ತಿರದ ಸರ್ವೀಸ್‌ ರಸ್ತೆಯಲ್ಲಿ ನಿಂತಿರುವ ಮಳೆ ನೀರು   

ಹಾವೇರಿ: ಅತಿವೃಷ್ಟಿ ಮತ್ತು ನೆರೆಯಿಂದ ಜಿಲ್ಲೆಯ ಪ್ರಮುಖ ರಸ್ತೆಗಳು ಕೆಸರುಗದ್ದೆಗಳಾಂತಾಗಿವೆ. ಗುಂಡಿಗಳ ಹಾದಿಯಲ್ಲಿ ತಬ್ಬಿಬ್ಬಾಗುವ ವಾಹನ ಚಾಲಕರು, ಸಂಚಾರ ಮಾಡಲು ನಿತ್ಯ ಸರ್ಕಸ್‌ ಮಾಡುವಂತಾಗಿದೆ.

ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಎಷ್ಟು ಆಳ ಇದೆ ಎಂಬುದರ ಅರಿವು ವಾಹನ ಚಾಲಕರಿಗೆ ತಿಳಿಯುವುದಿಲ್ಲ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಜಾರಿ ಬೀಳುವ ಬೈಕ್‌ ಸವಾರರು ಸಾವು–ನೋವುಗಳಿಗೆ ತುತ್ತಾಗುತ್ತಿದ್ದಾರೆ. ವಾಹನಗಳು ಕೂಡ ಪದೇ ಪದೇ ರಿಪೇರಿಗೆ ಬರುತ್ತವೆ. ಗ್ರಾಮೀಣ ಭಾಗದ ರಸ್ತೆ, ಮುಖ್ಯ ಜಿಲ್ಲಾ ರಸ್ತೆ, ಹೆದ್ದಾರಿ ಅಷ್ಟೇ ಏಕೆ ನಗರ ಮತ್ತು ಪಟ್ಟಣದೊಳಗಿನ ಒಳರಸ್ತೆಗಳು ಕೂಡ ಹಾಳಾಗಿದ್ದು, ಸಂಚಾರಕ್ಕೆ ಸಂಚಕಾರ ಒಡ್ಡುತ್ತಿವೆ.

ಹಾವೇರಿ ನಗರದ ಶಿವಾಜಿ ನಗರ, ನಾಗೇಂದ್ರನಮಟ್ಟಿ, ಶಾಂತಿನಗರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆಗಳು ರಾಡಿಯಾಗಿವೆ. ಇಲ್ಲಿ ಸೈಕಲ್‌ ಸವಾರರು, ಬೈಕ್‌ ಸವಾರರು, ಪಾದಚಾರಿಗಳು ನಿತ್ಯ ಜಾರಿ ಬೀಳುವುದು ಸಾಮಾನ್ಯ ದೃಶ್ಯವಾಗಿದೆ.

ADVERTISEMENT

ಕೃಷಿ ಉತ್ಪನ್ನ ಸಾಗಣೆಗೆ ತೊಡಕು: ಹೊಲಗಳಿಗೆ ಹೋಗುವ ರಸ್ತೆಗಳು ಕೆಸರುಗದ್ದೆಗಳಂತಾಗಿವೆ. ಇದರಿಂದ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಿಸಲು ತೀವ್ರ ಪರದಾಡುತ್ತಿದ್ದಾರೆ. ರಸ್ತೆ ದುರಸ್ತಿ ಮಾಡಿಸಿ ಎಂಬ ಅನ್ನದಾತರ ಕೂಗಿಗೆ ಅಧಿಕಾರಿಗಳು ಜಾಣ ಕಿವುಡರಾಗಿದ್ದಾರೆ.

ಸುತ್ತಾಡಬೇಕಾದ ದುಃಸ್ಥಿತಿ

ಹಿರೇಕೆರೂರ ತಾಲ್ಲೂಕಿನ ಅಬಲೂರು-ಸುತ್ತಕೋಟಿ ರಸ್ತೆ ಸಂಪೂರ್ಣ ಹಾಳಾಗಿ ಓಡಾಡಲು ಬಾರದಂತಾಗಿದೆ. ಚಿನ್ನಮುಳಗುಂದ, ವಡೆಯನಪುರ, ಅರಳೀಕಟ್ಟಿ ಮೊದಲಾದ ಗ್ರಾಮಗಳಿಗೆ ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಸುಮಾರು 5 ಕಿ.ಮೀ. ಉದ್ದದ ಈ ರಸ್ತೆ ಪೂರ್ಣ ಹಾಳಾಗಿರುವ ಕಾರಣ ಈ ಗ್ರಾಮಗಳ ಜನತೆ ಸುಮಾರು 8-10 ಕಿ.ಮೀ. ಸುತ್ತುಹಾಕಿ ಕೋಡ
ಗ್ರಾಮದ ಮೂಲಕ ತಾಲ್ಲೂಕು ಕೇಂದ್ರಕ್ಕೆ ಬರಬೇಕಾದ ಸ್ಥಿತಿ ಎದುರಾಗಿದೆ.

ಕೆರೆಯಂತಾದ ರಸ್ತೆ

ಶಿಗ್ಗಾವಿ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರದ ಜೋಡು ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದು ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚಾರಕ್ಕಾಗಿ ನಿತ್ಯ ವಾಹನ ಚಾಲಕರು ಪರದಾಡುವಂತಾಗಿದೆ.

ಹುಬ್ಬಳ್ಳಿಯಿಂದ ಹಾವೇರಿ ಮಾರ್ಗ ನಡುವೆ ಶಿಗ್ಗಾವಿ ಪಟ್ಟಣಕ್ಕೆ ನಿತ್ಯ ನೂರಾರು ಸಾರಿಗೆ ಸಂಸ್ಥೆ ಬಸ್‌ಗಳು, ಲಾರಿಗಳು ನಿತ್ಯ ಸಂಚಾರ ಮಾಡುತ್ತಿವೆ. ಆದರೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಸೇರುವ ಜೋಡು ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಎರಡು ಬದಿಗೆ ವಾಹನಗಳು ಬಂದರೆ ಸಂಚರಿಸಲು ಇಕ್ಕಟ್ಟಾಗಿದೆ.

ಹೈರಾಣಾದ ಬೈಕ್‌ ಸವಾರರು

ರಾಣೆಬೆನ್ನೂರು ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆ ಮತ್ತು ಯುಜಿಡಿ ಸಂಪರ್ಕಕ್ಕೆ ತೆಗೆದ ತಗ್ಗುಗಳಿಂದ ಬೈಕ್‌ ಸವಾರರು ರೋಸಿ ಹೋಗಿದ್ದಾರೆ. ಕಲ್ಲು ಪುಡಿ ಹಾಕಿ ಮುಚ್ಚಿದ್ದರೂ ಮತ್ತೆ ಎಲ್ಲಾ ಕಿತ್ತು ಹೋಗಿದೆ. ‘ಮುದೇನೂರು ರಾಣೆಬೆನ್ನೂರು ರಸ್ತೆ ಹನುಮನಹಳ್ಳಿ ಬಳಿ ರಸ್ತೆ ದುರಸ್ತಿಗೆ ₹68 ಲಕ್ಷ ಹಣ ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. 150 ಕಿ.ಮೀ ರಸ್ತೆ ಗುಂಡಿಗಳನ್ನು ತುಂಬಲು ಟೆಂಡರ್‌ ಆಗಿದೆ. ವಾರ್ಷಿಕ ನಿರ್ವಹಣೆ ಕಾಮಗಾರಿ ಕೂಡ ನಡೆದಿವೆ’ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಮಂಜುನಾಥ ತಿಳಿಸಿದರು.

6 ತಿಂಗಳಿಂದ ದುರಸ್ತಿಯಾಗಿಲ್ಲ

ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಹೊಂಡದಂತಹ ತಗ್ಗು ಬಿದ್ದಿದ್ದು, ಕಳೆದ 6 ತಿಂಗಳಿಂದ ದುರಸ್ತಿ ಕಂಡಿಲ್ಲ. ಹೀಗಾಗಿ ಈ ರಸ್ತೆಯ ಮೂಲಕ ಹಾಯ್ದು ಹೋಗುವ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ಅಂದಾಜು 800 ಮೀ ರಸ್ತೆ ತುಂಬಾ ಹಾಳಾಗಿದೆ.

ಸ್ಟೇಶನ್‌ ರಸ್ತೆ, ಸೋಗಿ ಓಣಿ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿ ಕೈಗೊಂಡಿದ್ದು ಹೆಸರಿಗೆ ಮಾತ್ರ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ ಎಂದು ನಾಗರಿಕ ಶಿವಣ್ಣ ನಾರಾಯಣಪುರ ದೂರಿದರು.

ಬ್ಯಾಡಗಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಸಿಡಿ ಸೇರಿದಂತೆ 4.97 ಕಿ.ಮೀ ರಾಜ್ಯ ಹೆದ್ದಾರಿ, 4 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ ಇವುಗಳ ಮರು ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ರಾಜೇಂದ್ರ ದೊಡ್ಮನಿ ತಿಳಿಸಿದ್ದಾರೆ.

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ ಪಿ.ಕೂರಗುಂದಮಠ, ಎಂ.ವಿ.ಗಾಡದ,ಎಚ್.ವಿ. ನಾಯ್ಕ, ಗಣೇಶಗೌಡ ಎಂ. ಪಾಟೀಲ, ಪ್ರಮೀಳಾ ಹುನಗುಂದ, ಸುರೇಖಾ ಪೂಜಾರ,ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.