ADVERTISEMENT

ಕಳಪೆ ಕಾಮಗಾರಿ: ತನಿಖೆಗೆ ಆಗ್ರಹ

₹20 ಕೋಟಿ ಅನುದಾನದ ನಕಲಿ ಬಿಲ್‌ ಸೃಷ್ಟಿ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 16:45 IST
Last Updated 7 ಅಕ್ಟೋಬರ್ 2020, 16:45 IST
ಕೆ.ಆರ್.‌ಐ.ಡಿ.ಬಿ.ಎಲ್ ವತಿಯಿಂದ ನಡೆದಿರುವ ಕಾಮಗಾರಿ ಕಳಪೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಣೆಬೆನ್ನೂರಿನಲ್ಲಿ ಬುಧವಾರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು 
ಕೆ.ಆರ್.‌ಐ.ಡಿ.ಬಿ.ಎಲ್ ವತಿಯಿಂದ ನಡೆದಿರುವ ಕಾಮಗಾರಿ ಕಳಪೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಣೆಬೆನ್ನೂರಿನಲ್ಲಿ ಬುಧವಾರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು    

ರಾಣೆಬೆನ್ನೂರು: 2019–20ನೇ ಸಾಲಿನಲ್ಲಿ ಪ್ರಕೃತಿ ವಿಕೋಪ ಪರಿಹಾರದಡಿ ಕಳಪೆ ಕಾಮಗಾರಿ ಮತ್ತು ಅಪೂರ್ಣ ಕಾಮಗಾರಿ ಮಾಡಿಸಿ ₹20 ಕೋಟಿ ಅನುದಾನದ ನಕಲಿ ಬಿಲ್‌ ತಯಾರಿಸಲಾಗಿದೆ ಎಂದು ಆರೋಪಿಸಿ, ನಗರದ ಕೆ.ಆರ್.‌ಐ.ಡಿ.ಬಿ.ಎಲ್‌ ಕಚೇರಿ ಮುಂದೆ ಬುಧವಾರ ರೈತ ಸಂಘದ ಪದಾಧಿಕಾರಿಗಳು ಮತ್ತು ಮಹಿಳೆಯರು ಪ್ರತಿಭಟನೆ ನಡೆಸಿದರು.

ಭ್ರಷ್ಟಾಚಾರದ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಪತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ‘ಲಾಕ್‌ಡೌನ್‌ ಅವಧಿಯಲ್ಲಿ ಕೆ.ಆರ್.‌ಐ.ಡಿ.ಬಿ.ಎಲ್ (ಲ್ಯಾಂಡ್‌ ಆರ್ಮಿ)‌ ವಿವಿಧ ಗ್ರಾಮಗಳಲ್ಲಿ ಕೈಗೊಂಡ ಕಾಮಗಾರಿ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಅವೆಲ್ಲವೂ ಕಳಪೆಯಾಗಿವೆ. ಜತೆಗೆ ಅಧಿಕಾರಿಗಳು ನಕಲಿ ಬಿಲ್‌ ತಯಾರಿಸಿದ್ದಾರೆ. ಹೀಗಾಗಿ ಸರ್ಕಾರ ಒಬ್ಬ ದಕ್ಷ ಅಧಿಕಾರಿಯನ್ನು ನೇಮಿಸಿ ತನಿಖೆ ಮಾಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಒಂದು ವಾರದೊಳಗೆ ತನಿಖೆಯನ್ನು ಚುರುಕುಗೊಳಿಸದಿದ್ದರೆ ಅ.19ರಂದು ಕೆಆರ್‌ಐಡಿಬಿಎಲ್‌ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆಆರ್‌ಐಡಿಬಿಎಲ್‌ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ರುದ್ರೇಶ ಹಾಗೂ ಮಹೇಂದ್ರಕರ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿಎಸ್‌.ಡಿ. ಹಿರೇಮಠ, ದಿಳ್ಳೆಪ್ಪ ಸತ್ಯಪ್ಪನವರ, ಚಂದ್ರಪ್ಪ ಬೇಡರ, ಬಸವರಾಜ ಕೊಂಗಿ, ನಾಗರಾಜ, ಗದಿಗೆಪ್ಪ, ಆಂಜನೇಯ, ರಾಘವೇಂದ್ರ, ಹರಿಹರಗೌಡ ಪಾಟೀಲ, ತಿಪ್ಪೇಶ, ಕಿಟ್ಟಪ್ಪ ಹಾಗೂ ಹಳದವ್ವ, ಸೀತವ್ವ, ಕರಬಸವ್ವ, ಎಚ್‌.ಎಸ್‌. ಪಾಟೀಲ, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.