ADVERTISEMENT

ಹಾವೇರಿ: 86ನೇ ನುಡಿಜಾತ್ರೆಗೆ ಮೈಸೂರು ದಸರಾ ಮಾದರಿ ದೀಪಾಲಂಕಾರ

ಸಾಹಿತ್ಯ ಸಮ್ಮೇಳನ: ವೃತ್ತಗಳು, ರಸ್ತೆಗಳು ಜಗಮಗ, ಕಟ್ಟಡಗಳಿಗೆ ಸಿಂಗಾರ

ಸಿದ್ದು ಆರ್.ಜಿ.ಹಳ್ಳಿ
Published 29 ಡಿಸೆಂಬರ್ 2022, 5:27 IST
Last Updated 29 ಡಿಸೆಂಬರ್ 2022, 5:27 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಹಾವೇರಿ:86ನೇ ನುಡಿಜಾತ್ರೆಗೆ ಹಾವೇರಿ ನಗರವನ್ನು ಮಧುವಣಗಿತ್ತಿಯಂತೆ ಸಿಂಗಾರ ಮಾಡಲು, ಪ್ರಮುಖ ವೃತ್ತ, ರಸ್ತೆ ಮತ್ತು ಕಟ್ಟಡಗಳಿಗೆ ‘ಮೈಸೂರು ದಸರಾ ಮಾದರಿ ದೀಪಾಲಂಕಾರ’ ಮಾಡಲು ಸಿದ್ಧತೆ ಆರಂಭವಾಗಿದೆ.

ನಗರದ ಮುಖ್ಯ ಬೀದಿಗಳ ಗೋಡೆಗಳಿಗೆ ವರ್ಲಿ ಕಲೆಯ ಚಿತ್ತಾರದ ಜೊತೆಗೆ ಸುಂದರವಾಗಿ ದೀಪಾಲಂಕಾರ ಮಾಡಲು ಸಮ್ಮೇಳನದ ಅಲಂಕಾರ ಉಪ ಸಮಿತಿ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನ ಮೋಹನ್‌ಕುಮಾರ್‌ ಸೌಂಡ್‌ ಅಂಡ್‌ ಲೈಟಿಂಗ್ಸ್‌ ಸಂಸ್ಥೆಗೆ ₹30 ಲಕ್ಷದ ಗುತ್ತಿಗೆ ನೀಡಲಾಗಿದೆ.

‘ಕಳೆದ 9 ವರ್ಷಗಳಿಂದ ಮೈಸೂರು ದಸರಾ, ಮಲೆಮಹದೇಶ್ವರ ಜಾತ್ರೆ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಕಾರ್ಕಳ ಉತ್ಸವ, ಹಂಪಿ ಉತ್ಸವ ಹಾಗೂ ಬೆಂಗಳೂರಿನ ಗಣೇಶ ಉತ್ಸವ ಸೇರಿದಂತೆ ಪ್ರಮುಖ ಉತ್ಸವ, ಜಾತ್ರೆಗಳಿಗೆ ದೀಪಾಲಂಕಾರ ಮಾಡಿರುವ ಅನುಭವ ನಮಗಿದೆ’ ಎಂದು ಗುತ್ತಿಗೆದಾರ ವಿ. ಮೋಹನ್‌ಕುಮಾರ್‌ ತಿಳಿಸಿದರು.

ADVERTISEMENT

ವೃತ್ತಗಳಿಗೆ ಸಿಂಗಾರ:

ಹೊಸಮನಿ ಸಿದ್ದಪ್ಪ ವೃತ್ತ, ರಾಣಿ ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಸುಭಾಷ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಗಾಂಧಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ಜೆ.ಎಚ್‌.ಪಟೇಲ್‌ ವೃತ್ತ, ಎಂ.ಎಂ. ಸರ್ಕಲ್‌, ಜಯಪ್ರಕಾಶ ನಾರಾಯಣ ಸರ್ಕಲ್‌, ಸಂಗೂರ ಕರಿಯಪ್ಪ ಸರ್ಕಲ್‌ ಮುಂತಾದ ವೃತ್ತಗಳಿಗೆ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ.

ಕೆಇಬಿ ಸರ್ಕಲ್‌ನಿಂದ ಹುಬ್ಬಳ್ಳಿ ರೋಡ್‌ ಬೈಪಾಸ್‌ವರೆಗೆ ಹಳೇ ಪಿ.ಬಿ.ರಸ್ತೆ, ಎಂ.ಜಿ.ರಸ್ತೆ, ಗುತ್ತಲ ರಸ್ತೆ ಮಾರ್ಗ, ತೋಟದ ಯಲ್ಲಾಪೂರ ಮಾರ್ಗ, ಹಾನಗಲ್ ಬೈಪಾಸ್‌ವರೆಗೆ, ಕಾಗಿನೆಲೆ ಬೈಪಾಸ್, ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ ಮಾರ್ಗ, ಹಳೆಯ ಅಂಚೆ ಕಚೇರಿ ಮಾರ್ಗ, ಎಂ.ಪಿ.ಎಂ.ಸಿ. ಮಾರ್ಗ ಸೇರಿದಂತೆ ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ವಿದ್ಯುತ್‌ ದೀಪಗಳು ಜಗಮಗಿಸಲಿವೆ.

ನಗರ ಅಲಂಕಾರ ಸಮಿತಿಯಿಂದ ಪ್ರತಿ ವೃತ್ತದಲ್ಲಿ ಹೂ ಹಾಗೂ ವಿದ್ಯುತ್ ದೀಪಾಲಂಕಾರ, ಎಲ್ಲ ಕಟ್ಟಡಗಳ ಮೇಲೆ ವಿದ್ಯುತ್ ದೀಪಾಲಂಕಾರ, ಸರ್ಕಾರಿ ಕಚೇರಿಗಳಲ್ಲಿ ಆಯಾ ಇಲಾಖೆ ವೆಚ್ಚದಲ್ಲಿ ದೀಪಾಲಂಕಾರ ಮಾಡುವ ಕುರಿತಂತೆ ಯೋಜಿಸಲಾಗಿದೆ.

ಹೂವಿನ ಅಲಂಕಾರ:

‘ಹಾವೇರಿ ನಗರದ ವೃತ್ತಗಳಿಗೆ, ಡಿವೈಡರ್‌ಗಳಿಗೆ, ಪ್ರವೇಶ ದ್ವಾರಗಳಿಗೆ ಹಾಗೂ ಬಸ್‌ ನಿಲ್ದಾಣದ ಎದುರುಗಡೆ ಇರುವ ಸ್ಥಳಗಳಲ್ಲಿ ವಿವಿಧ ಹೂವುಗಳ ಅಲಂಕಾರ ಮಾಡುವುದಕ್ಕೆ ಗುಲಾಬಿ, ಸಾಲ್ವಿಯಾ, ಪೆಟೋನಿಯಾ, ಪ್ಲಾಕ್ಸ್‌, ಗೋಲ್ಡನ್‌ ರಾಡ್‌ ಮುಂತಾದ ಹೂವುಗಳನ್ನು ಬಳಸಲಾಗುತ್ತದೆ.ಜರ್ಬೆರಾ, ಆರ್ಕಿಡ್‌, ಅಂತೋರಿಯಂ, ಬರ್ಡ್‌ ಆಫ್‌ ಪ್ಯಾರಡೈಸ್‌, ಗ್ಲಾಡಿಯೋಲಸ್‌, ಕಾರ್ನೆಷನ್‌, ಲಿಲ್ಲಿ ಹೂವುಗಳಿಂದ ನಗರವನ್ನು ಅಲಂಕರಿಸಲಾಗುವುದು’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್‌. ಮಾಹಿತಿ ನೀಡಿದರು.

ಒಂದು ಸಾವಿರ ಕನ್ನಡ ಬಾವುಟ

ಒಂದು ಸಾವಿರ ಕನ್ನಡ ಧ್ವಜಗಳನ್ನು ನಗರದ ವಿವಿಧೆಡೆ ಅಳವಡಿಸಲಾಗುತ್ತದೆ. ಹಾವೇರಿ ನಗರದಲ್ಲಿರುವ ಪ್ರಮುಖ ಪ್ರವೇಶ ಮಾರ್ಗದಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಿಲು ಹಾಗೂ ನಗರದ ಬಸ್ ನಿಲ್ದಾಣದ ಮೇಲ್ಸೇತುವೆಗೆ ಫ್ಲೆಕ್ಸ್‌ಬೋರ್ಡ್‌ ಅಳವಡಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಲು ತೀರ್ಮಾನಿಸಲಾಗಿದೆ ಎಂದುಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.

ನಗರದ ಡಿವೈಡರ್‌ಗಳಿಗೆ ಕೆಂಪು– ಹಳದಿ ಬಣ್ಣ ಬಳಿಯಲು, ನಗರದ ಎಲ್ಲ ವೃತ್ತ, ವಿದ್ಯುತ್ ಕಂಬ, ಡಿವೈಡರ್ ಕಂಬಗಳಿಗೆ ವಿಶೇಷ ಹೂವಿನ ಅಲಂಕಾರ, ಕನ್ನಡ ಧ್ವಜದ ಮಾದರಿಯಲ್ಲಿ ಕೆಂಪು-ಹಳದಿ ಬಟ್ಟೆಯಿಂದ ಶೃಂಗಾರ ಹಾಗೂ ಕಾಂಪೌಂಡ್ ಗೋಡೆಗಳ ಮೇಲೆ ವರ್ಲಿಕಲೆ ಜೊತೆಗೆ ಚಿತ್ರಕಲಾ ಬರಹ ಬಿಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.