ADVERTISEMENT

‘ಶಿಕ್ಷಣ ವ್ಯವಸ್ಥೆ ಹದಗೆಡಿಸಲು ಬಿಡಬೇಡಿ’

ಬಹಿರಂಗ ಸಭೆಯಲ್ಲಿ ಎಸ್ಎಫ್ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ ಸಾನು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 13:31 IST
Last Updated 11 ಆಗಸ್ಟ್ 2022, 13:31 IST
ಎಸ್ಎಫ್ಐ ಅಖಿಲ ಭಾರತ ಜಾಥಾವನ್ನು ಗುರುವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸ್ವಾಗತಿಸಿದ ಸಂದರ್ಭದಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿದರು 
ಎಸ್ಎಫ್ಐ ಅಖಿಲ ಭಾರತ ಜಾಥಾವನ್ನು ಗುರುವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸ್ವಾಗತಿಸಿದ ಸಂದರ್ಭದಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿದರು    

ಹಾವೇರಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಟ್ಟು ಐದು ಕಡೆಯಿಂದ 45 ದಿನಗಳ ಕಾಲ ಶಿಕ್ಷಣ ಉಳಿಸಿ, ಸಂವಿಧಾನ ಉಳಿಸಿ, ದೇಶ ಉಳಿಸಿ ಎಂಬ ಘೋಷಣೆಯಡಿ ದೇಶವ್ಯಾಪಿ ಸಂಚರಿಸುತ್ತಿರುವ ಎಸ್ಎಫ್ಐ ಅಖಿಲ ಭಾರತ ಜಾಥಾವನ್ನು ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪುಷ್ಪವೃಷ್ಟಿಗೈದು ಸ್ವಾಗತಿಸಲಾಯಿತು.

ಹುತಾತ್ಮ ಸಂಗಾತಿ ಮೈಲಾರ ಮಹಾದೇವಪ್ಪ ಪ್ರತಿಮೆಗೆ ಗೌರವ ಮಾಲಾರ್ಪಣೆ ಮಾಡಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಅವರು ಎಸ್ಎಫ್ಐ ಶ್ವೇತ ಪತಾಕೆಯನ್ನು ‌ಎಸ್ಎಫ್ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ. ಸಾನು ಅವರಿಗೆ ನೀಡುವ ಮೂಲಕ ಜಾಥಾ ಮೆರವಣಿಗೆಗೆ ಶುಭಾ ಹಾರೈಸಿದರು.

ಎಸ್.ಜೆ.ಎಂ. ಪಿಯು ಕಾಲೇಜು ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿವಿ.ಪಿ.ಸಾನು ಮಾತನಾಡಿ, ‘ಸರ್ಕಾರಗಳು ಇತಿಹಾಸದ ಪಾಠಗಳನ್ನು ಬದಲಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಲು ಪ್ರಯತ್ನಿಸುತ್ತಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ಶಿಥಿಲಗೊಳಿಸುವ ಈ ಪ್ರಯತ್ನವನ್ನು ನಾವೆಲ್ಲ ಪರಸ್ಪರ ಕೈಜೋಡಿಸಿ ಪ್ರತಿರೋಧಿಸುವುದು ನಮ್ಮ ಕಾಲದ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಶಿಕ್ಷಣವನ್ನು ಉಳಿಸುವ ಹಾಗೂ ಲಕ್ಷಾಂತರ ಯುವಜನರ ಉದ್ಯೋಗ ಭರವಸೆ ಉದ್ದೇಶದಿಂದ ದೇಶವ್ಯಾಪಿ ಚಳವಳಿಯನ್ನು ಸಂಘಟಿಸುತ್ತಿದೆ’ ಎಂದರು.

ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ್ ಮಾತನಾಡಿ, ‘ಪ್ರಸಕ್ತ ಸಂದರ್ಭದಲ್ಲಿ ದೇಶದ ಮೇಲೆ ಆಗುತ್ತಿರುವ ಶೈಕ್ಷಣಿಕ ದಾಳಿ ಸರ್ಕಾರಗಳು ಯಾವ ರೀತಿಯಲ್ಲಿ ನಮ್ಮನ್ನು ಜಾತಿ, ಧರ್ಮ ಹೆಸರಿನಲ್ಲಿ ಒಡೆದಾಳುತ್ತಿದ್ದಾರೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ಈ ಜಾಥಾ ನಡೆಯುತ್ತಿದೆ ಎಂದು ತಿಳಿಸಿದರು.

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ, ‘ನಮ್ಮ ನಾಡಿನ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮಾಡುತ್ತಿರುವ ವಂಚನೆಯ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ‘ಇಡೀ ಜಿಲ್ಲೆಯಲ್ಲಿ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಭ್ರಷ್ಟಾಚಾರ ತಾಂಡವಾಡುತ್ತಿದೆ’ ಎಂದು ಆರೋಪಿಸಿದರು.

ಎಸ್ಎಫ್ಐ ಮಾಜಿ ಮುಖಂಡ ಬಸವರಾಜ ಪೂಜಾರ, ಎಸ್ಎಫ್ಐ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ, ಎಐಎಲ್‌ಯು ಮುಖಂಡ ನಾರಾಯಣ ಕಾಳೆ, ಸಿಐಟಿಯು ಮುಖಂಡ ಅಂದಾನೆಪ್ಪ ಹೆಬಸೂರು, ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯರಾದ ಗಣೇಶ ರಾಥೋಡ, ಅರುಣ್ ಕಡಕೋಳ್, ಗುಡ್ಡಪ್ಪ ಮಡಿವಾಳರ, ತಾಲ್ಲೂಕು ಕಾರ್ಯದರ್ಶಿ ಕಾವ್ಯಾ, ಡಾ.ಗಂಗಯ್ಯ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.