ADVERTISEMENT

ಹಾವೇರಿ: ಭೂದಾಖಲೆ ಸೃಷ್ಟಿಸುವ ಕಾರ್ಯಕ್ಕೆ ಚಾಲನೆ

ಸವಣೂರ ತಹಶೀಲ್ದಾರ್ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 17:06 IST
Last Updated 10 ಮಾರ್ಚ್ 2021, 17:06 IST
ಸವಣೂರ ತಹಶೀಲ್ದಾರ್‌ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರು ಜಮೀನಿನ ಭೂ ದಾಖಲೆಗಳನ್ನು ಹೊಸದಾಗಿ ಸೃಷ್ಟಿಸುವ ಕಾರ್ಯದ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು 
ಸವಣೂರ ತಹಶೀಲ್ದಾರ್‌ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರು ಜಮೀನಿನ ಭೂ ದಾಖಲೆಗಳನ್ನು ಹೊಸದಾಗಿ ಸೃಷ್ಟಿಸುವ ಕಾರ್ಯದ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು    

ಹಾವೇರಿ: ಪ್ರತಿಭಟನೆ ವೇಳೆ ಸವಣೂರ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯದಲ್ಲಿ ಸುಟ್ಟುಹೋಗಿದ್ದ 33 ಗ್ರಾಮಗಳ ರೈತರ ಜಮೀನಿನ ಭೂ ದಾಖಲೆಗಳನ್ನು ಹೊಸದಾಗಿ ಸೃಷ್ಟಿಸುವ ಕಾರ್ಯಕ್ಕೆ ಬುಧವಾರ ಚಾಲನೆ ದೊರೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸವಣೂರು ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸುಟ್ಟು ಹೋಗಿರುವ ಭೂದಾಖಲೆಗಳನ್ನು ಹೊಸದಾಗಿ ಸೃಜಿಸಲು ಸರ್ಕಾರದ ಯಾವ ಮಾನದಂಡಗಳನ್ನು ಅನುಸರಿಸಬೇಕು, ನಿಯಮಾವಳಿ ಅನುಸಾರ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಹೊಸ ಕಡತಗಳನ್ನು ಆರಂಭಿಸುವ ಕುರಿತಂತೆ ತಹಶೀಲ್ದಾರ್ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿವರವಾದ ಮಾಹಿತಿ ನೀಡಿದರು.

ಪ್ರತಿ ಖಾತೆದಾರರಿಗೆ ಸಂಬಂಧಿಸಿದ ಜಮೀನಿನ ಹಳೆ ದಾಖಲೆಗಳನ್ನು ಪಡೆಯಬೇಕು. ದಾಖಲೆ ಸಂಗ್ರಹಕ್ಕೆ ಪ್ರತಿ ಗ್ರಾಮಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು ಈ ಕುರಿತಂತೆ ಡಂಗೂರದ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ದಾಖಲೆ ಸಂಗ್ರಹಿಸಿ ಅಭಿಲೇಖಾಲಯಕ್ಕೆ ಸಲ್ಲಿಸಬೇಕು. ತಹಶೀಲ್ದಾರ್‌ ಕಚೇರಿಯಲ್ಲಿ 33 ಗ್ರಾಮಗಳ ಲಭ್ಯವಿರುವ ಭೂದಾಖಲೆ ಕುರಿತಂತೆ ಗ್ರಾಮವಾರು ಪಟ್ಟಿ ಮಾಡಬೇಕು ಎಂದು ಸೂಚನೆ ನೀಡಿದರು.

ADVERTISEMENT

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸದರಿ ಗ್ರಾಮಗಳ ಲಭ್ಯವಿರುವ ಭೂದಾಖಲೆಗಳನ್ನು ತರಿಸಿಕೊಳ್ಳಬೇಕು. ಈ ಗ್ರಾಮಗಳ ಸರ್ವೆ ನಂಬರ್‌ಗಳನ್ನು ಪಟ್ಟಿಮಾಡಿ ಅಳತೆ ಮತ್ತು ಪೋಡಿಗಾಗಿ ಭೂಮಾಪನ ಇಲಾಖೆಗೆ ಕಳಿಸಿರುವ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದೃಢೀಕರಿಸಬೇಕು, ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಲಭ್ಯವಿರುವ ದಾಖಲೆಗಳನ್ನು ಹಾಗೂ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಲಭ್ಯವಿರುವ ಭೂದಾಖಲೆಗಳನ್ನು ಪಡೆಯಬೇಕು. ಎಲ್ಲ ದಾಖಲೆಗಳನ್ನು ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳು ದೃಢೀಕರಿಸಬೇಕು. ಈ ಕುರಿತಂತೆ ತ್ವರಿತ ಕ್ರಮವಹಿಸಲು ಸೂಚಿಸಿದರು.

ಘಟನೆ ಹಿನ್ನೆಲೆ:ಸವಣೂರ ಪಟ್ಟಣದ ಕುಡಿಯುವ ನೀರಿನ ಪೂರೈಕೆಗೆ ಹಮ್ಮಿಕೊಂಡ ಪ್ರತಿಭಟನೆ ವೇಳೆಯಲ್ಲಿ ನಡೆದ ದೊಂಬಿಯಲ್ಲಿ 29 ಏಪ್ರಿಲ್ 2000ರಂದು ಸವಣೂರ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯದಲ್ಲಿ ಇರಿಸಿದ್ದ ಸವಣೂರು ಹೋಬಳಿಯ 33 ಗ್ರಾಮಗಳ ರೈತರ ಭೂ ದಾಖಲೆಗಳು ಸುಟ್ಟುಹೋಗಿದ್ದವು.

ಸವಣೂರು ತಾಲ್ಲೂಕು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್‌ ಸಿ.ಎಸ್. ಸಂಗಿ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರರಾದ ಡಿ.ಎನ್ ಕುಲಕರ್ಣಿ, ಸಿ.ಎಸ್. ಜಾಧವ್ ಹಾಗೂ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.