
ಬ್ಯಾಡಗಿ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದಕಲು ಅವಕಾಶ ನೀಡಬೇಕು ಎಂದು ಹಾಲುಮತ ಮೂಲ ಪೀಠ ಸರೂರಿನ ರೇವಣಸಿದ್ದೇಶ್ವರ ಶ್ರೀಗಳು ನುಡಿದರು.
ಪಟ್ಟಣದ ಬೀರೇಶ್ವರ ಸಮುದಾಯ ಭವನದಲ್ಲಿ ಕನಕ ನೌಕರರ ಸಂಘ ತಾಲ್ಲೂಕು ಘಟಕ ದಾಸಶ್ರೇಷ್ಠ ಕನಕದಾಸರ 538 ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಅಂಕಗಳ ಬೆನ್ನು ಹತ್ತದೇ ಕೌಶಲ್ಯಯುತ ಜ್ಞಾನ ಪಡೆದುಕೊಳ್ಳಬೇಕಾಗಿದೆ. ಶಿಕ್ಷಣದಿಂದ ಪಡೆದಂತಹ ಜ್ಞಾನದಿಂದ ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಶಿಕ್ಷಣದಿಂದ ಸಮುದಾಯದ ಬದಲಾವಣೆ ಮಾಡಲು ಸಾಧ್ಯವಿದ್ದು, ದುಂದುವೆಚ್ಚ ಮತ್ತು ಆಡಂಬರದ ಹಬ್ಬಗಳನ್ನು ಆಚರಿಸದೆ ಅದೇ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು ಎಂದರು.
ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಸಮಾಜದವರು ಮೌಢ್ಯಗಳಿಂದ ದೂರವಿದ್ದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅಂದಲ್ಲಿ ಮಾತ್ರ ಸಮಾಜದ ಪ್ರಗತಿ ಸಾಧ್ಯವಿದೆ ಎಂದರು.
ಬೆಂಗಳೂರಿನ ಇನ್ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಜಿ ಬಿ ವಿನಯಕುಮಾರ ಪಿಯುಸಿ ಬಳಿಕ ಮಕ್ಕಳಿಗೆ ನೀಟ್, ಕೆಇಎ ನಡೆಸುವ ಎಂಜಿನೀಯರಿಂಗ್ ಕೋರ್ಸ್‌ಗಳನ್ನು ಮಾತ್ರ ಗುರಿಯಾಗಿಸಿಕೊಳ್ಳದೆ ಕ್ಲಾಟ್, ಎನ್‌ಡಿಎ, ಎನ್‌ಎಸ್‌ಡಿ, ಎನ್‌ಐಐಟಿ, ಐಐಎಸ್‌ಸಿ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಿಳುವಳಿಕೆ ಪಡೆದುಕೊಳ್ಳಬೇಕು. ಜೊತೆಗೆ ಅಂತಹ ಪರೀಕ್ಷೆಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾಗಿದೆ ಎಂದರು.
ದೆಹಲಿಯ ಏಮ್ಸ್ , ನ್ಯಾಶನಲ್ ಸ್ಕೂಲ್ ಆಫ್ ಲಾ, ಎನ್ಐಐಟಿಗಳು ಕೌಶಲ್ಯಯುತ ಜ್ಞಾನ ಹೊಂದಿದವರನ್ನು ಕೈಬೀಸಿ ಕರೆಯುತ್ತವೆ. ಆ ನಿಟ್ಟಿನಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು. ಪುಸ್ತಕದ ಜ್ಞಾನದಾಚೆಗೆ ಕಲೆ, ಸಾಹಿತ್ಯ, ಸಂಗೀತ, ದಿನ ಪತ್ರಿಕೆಗಳನ್ನು ನಿತ್ಯ ಓದಬೇಕು ಇದಿಂದ ಜ್ಞಾನ ವಿಕಾಸ ಸಾಧ್ಯವಿದೆ ಎಂದರು.
ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ ರಾಘವೇಂದ್ರ ಜಿಗಳಿಕೊಪ್ಪ, ಬಸವರಾಜ ಗುರಿಕಾರ, ಉಮೇಶ ಕರಿಗಾರ ಮಾತನಾಡಿದರು. ಕುರುಬ ನೌಕರರ ಸಂಘದ ಅಧ್ಯಕ್ಷ ಎನ್.ಎಚ್.ಬಣಕಾರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಾಗರಾಜ ಆನ್ವೇರಿ, ಬೀರೇಶ್ವರ ಪಂಚ ಕಮೀಟಿ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಜಗಾಪುರ, ಖಜಾಂಚಿ ರಾಮಣ್ಣ ಉಕ್ಕುಂದ, ಮಲ್ಲಿಕಾರ್ಜುನ ಕರಲಿಂಗಪ್ಪನವರ, ಭೀರಪ್ಪ ಬಣಕಾರ, ಮಲ್ಲೇಶ ಕರಿಗಾರ, ಎನ್.ಎಸ್.ಚೌಡಾಳ, ಬಿಇಒ ಎಸ್.ಜಿ.ಕೋಟಿ, ಪಿಎಸ್‌ಐ ಭಾರತಿ ಕುರಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾಲತೇಶ ಕಂಬಳಿ, ಗುರುರಾಜ ಕಂಬಳಿ, ಮಲ್ಲಪ್ಪ ಕರೇಣ್ಣನವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.