ADVERTISEMENT

ಶಿಗ್ಗಾವಿ: ಜೇಕಿನಕಟ್ಟಿ, ಶಿವಪುರ ತಾಂಡಾ ಸುತ್ತ ಆನೆಗಳ ಹಿಂಡು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 5:11 IST
Last Updated 29 ನವೆಂಬರ್ 2020, 5:11 IST
ಶಿಗ್ಗಾವಿ ತಾಲ್ಲೂಕಿನ ಜೇಕಿನಕಟ್ಟಿ, ಶಿವಪುರ ತಾಂಡಾದ ಅರಣ್ಯ ಪ್ರದೇಶದಲ್ಲಿ ಶನಿವಾರ ಆನೆಗಳ ಹಿಂಡು ಪ್ರತ್ಯಕ್ಷವಾದ ಕಾರಣ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು
ಶಿಗ್ಗಾವಿ ತಾಲ್ಲೂಕಿನ ಜೇಕಿನಕಟ್ಟಿ, ಶಿವಪುರ ತಾಂಡಾದ ಅರಣ್ಯ ಪ್ರದೇಶದಲ್ಲಿ ಶನಿವಾರ ಆನೆಗಳ ಹಿಂಡು ಪ್ರತ್ಯಕ್ಷವಾದ ಕಾರಣ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು   

ಶಿಗ್ಗಾವಿ: ತಾಲ್ಲೂಕಿನ ಜೇಕಿನಕಟ್ಟಿ, ಶಿವಪುರ ತಾಂಡಾದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಶನಿವಾರ ಆರು ಆನೆಗಳ ಹಿಂಡು ಪ್ರತ್ಯಕ್ಷವಾದ ಕಾರಣ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಶನಿವಾರ ಕಾರ್ಯಾಚರಣೆ ನಡೆಸಿದರು.

‌ತಾಲ್ಲೂಕಿನ ಜೇಕಿನಕಟ್ಟಿ, ಶಿವಪುರ ತಾಂಡದ ಸುತ್ತಲಿನ ಹೊಲಗದ್ದೆಗಳಲ್ಲಿ ಬೆಳಿಗ್ಗೆ ಕೃಷಿ ಕಾರ್ಯದಲ್ಲಿ ನಿರತರಾದವರು ಆನೆಗಳ ಹಿಂಡು ಕಂಡು ಭಯದಿಂದ ಕೆಲಸ, ಕಾರ್ಯಗಳನ್ನು ಅಲ್ಲೇ ಬಿಟ್ಟು ಮನೆಗೆ ಓಡಿ ಬಂದಿದ್ದಾರೆ. ಕೆಲವರು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ದುಂಢಸಿ ಅರಣ್ಯ ಇಲಾಖೆ ಅಧಿಕಾರಿ ರಮೇಶ ಸೇತಸನದಿ ಹಾಗೂ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಆನೆಗಳನ್ನು ಹಿಡಿಯುವವರೆಗೆ ಗ್ರಾಮಸ್ಥರು
ಎಚ್ಚರಿಕೆ ವಹಿಸಬೇಕು. ಒಂಟಿಯಾಗಿ ಯಾರು ಓಡಾಡಬಾರದು. ಅರಣ್ಯ ಇಲಾಖೆ ಸಿಬ್ಬಂದಿ ನೀಡುವ ಮುಂಜಾ
ಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಜೇಕಿನಕಟ್ಟಿ ಮೊರಾರ್ಜಿ ವಸತಿ ಶಾಲೆ ಪಕ್ಕದ ಹತ್ತಿರದ ಅರಣ್ಯ ಪ್ರದೇಶದಲ್ಲಿ ಒಂದು ಮರಿ ಆನೆ ಸೇರಿ 6 ಆನೆಗಳ ಹಿಂಡು ಠಿಕಾಣಿ ಹೂಡಿದ್ದು, ವಲಯ ಅರಣ್ಯಾಧಿಕಾರಿ ರಮೇಶ ಸೇತಸನದಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಿಡಿ ಮದ್ದು ಹಾಗೂ ಹುಸಿ ಬಾಂಬ್ ಸಿಡಿಸಿದರು. ಆನೆಗಳು ಭಯಪಡದೆ ಶಬ್ದದ ಕಡೆಗೆ ತಿರುಗಿ ಬರುತ್ತಿವೆ ವಿನಃ ಹೆದರಿ ಓಡುತ್ತಿಲ್ಲ. ಹಾಗಾಗಿ ಕೃಷಿ ಬೆಳೆಗೆ ಸಾಕಷ್ಟು ಹಾನಿ ಮಾಡಿವೆ. ಶಿವಪುರ ಗ್ರಾಮದ ಸುತ್ತಲಿನ ಅರಣ್ಯದ ಸುತ್ತಲು ತಿರುಗಾಡುತ್ತಿವೆ ಎನ್ನಲಾಗಿದೆ.

‘ಆರು ಆನೆಗಳು ಯಲ್ಲಾಪುರ ಅರಣ್ಯ ಪ್ರದೇಶಗಳಿಂದ ಬಂದಿವೆ ಎನ್ನಲಾಗಿದ್ದು, ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾದರೆ ಸರ್ಕಾರ ಪರಿಹಾರ ನೀಡುತ್ತದೆ. ಆನೆಗಳು ಜನರ ಮೇಲೆ ದಾಳಿ ಮಾಡಬಹುದು. ಹೀಗಾಗಿ ಜಾಗೃತರಾಗಿರಬೇಕು. ಅವುಗಳನ್ನು ಓಡಿಸಲು ಯಲ್ಲಾಪುರ ಅರಣ್ಯ ಪ್ರದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದು, ಅವುಗಳನ್ನು ಓಡಿಸಲು ಎರಡು ಪಡೆಯನ್ನು ಸಿದ್ಧಪಡಿಸಲಾಗಿದೆ. ಬಂಕಾಪೂರ ಹಾಗೂ ಶಿಗ್ಗಾವಿ ಕಡೆಗೆ ಹೋಗದಂತೆ ಸೂಕ್ತ ಬಂದೂಬಸ್ತ್‌ ಮಾಡಲಾಗಿದ್ದು, ಕಾರ್ಯಾಚರಣೆ ನಡೆದಿದೆ’ ಎಂದು ದುಂಢಸಿ ವಲಯ ಅರಣ್ಯ ಅಧಿಕಾರಿ ರಮೇಶ ಸೇತಸನದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.