ರಾಣೆಬೆನ್ನೂರು: ತಾಲ್ಲೂಕಿನ ಮುಷ್ಟೂರು ಗ್ರಾಮದ ರೈತ ಹನುಮಂತಪ್ಪ ತಿರಕಪ್ಪ ಯಲ್ಲಕ್ಕನವರ (65) ಅವರು ತಮ್ಮ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಹೆಸರಿನಲ್ಲಿ 3 ಎಕರೆ ಜಮೀನಿದ್ದು, ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರು ಮತ್ತು ಪುತ್ರ ಇದ್ದಾರೆ.
ಮನೆತನಕ್ಕೆ ಮತ್ತು ಕೃಷಿ ಚಟುವಟಿಕೆಗಾಗಿ ಗ್ರಾಮದ ವಿಎಸ್‌ಎಸ್ ಬ್ಯಾಂಕ್, ಮಾಕನೂರು ಕಾರ್ಪೋರೇಷನ್ ಬ್ಯಾಂಕ್ ಮತ್ತು ಖಾಸಗಿ ಸೇರಿದಂತೆ ಒಟ್ಟು ₹6 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಸಾಲದ ಹೊರೆ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ: ಮೃತ ರೈತ ಹನುಮಂತಪ್ಪ ಯಲ್ಲಕ್ಕನವರ (65) ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಹಾಗೂ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಗರದ ಹಲಗೇರಿ ರಸ್ತೆಯ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಶವ ಇಟ್ಟು ಪ್ರತಿಭಟನೆ ನಡೆಸಿದರು.
‘ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಇಂತಹ ಅನ್ಯಾಯದ ಸಾವಿಗೆ ಕಾರಣವಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ರೈತ ಮುಖಂಡ ರವೀಂದ್ರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಯಲ್ಲಪ್ಪ ಓಲೇಕಾರ, ಮಲ್ಲಪ್ಪ ಲಿಂಗದಹಳ್ಳಿ, ಧರ್ಮರಾಜ ಕುಪ್ಪೇಲೂರ, ಬಿ.ಡಿ. ಸವಣೂರು, ನಾಗನಗೌಡ ಪಾಟೀಲ, ಉಮೇಶ ಉದಗಟ್ಟಿ, ಅನೀಲ ಮುಷ್ಟೂರನಾಯಕ, ಶ್ರೀನಿವಾಸರಡ್ಡಿ ಬಳ್ಳಾರಿ ಪ್ರತಿಭಟನೆಯಲ್ಲಿ ಇದ್ದರು.
ಕಂದಾಯ ಇಲಾಖೆಯ ಉಪತಹಶೀಲ್ದಾರ್ ಎಂ.ಎಸ್.ಕಡೂರ, ಕಂದಾಯ ನಿರೀಕ್ಷಕ ಮಂಜುನಾಥ ಕೆಂಚರಡ್ಡಿ, ಕೃಷಿ ಇಲಾಖೆಯ ಸಂತೋಷ ಅರಳಿ ಮುಂತಾದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿಯಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.