ADVERTISEMENT

ಎಆರ್‌ಟಿಒ ಕಚೇರಿಗೆ ರೈತರ ಮುತ್ತಿಗೆ

ಭ್ರಷ್ಟಾಚಾರ ಆರೋಪ: ಎಆರ್‌ಟಿಒ, ಅಧೀಕ್ಷಕರ ಅಮಾನತಿಗೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 3:47 IST
Last Updated 23 ಸೆಪ್ಟೆಂಬರ್ 2020, 3:47 IST
ಎಆರ್‌ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಗೂ ಎಆರ್‌ಟಿಒ ಮತ್ತು ಅಧೀಕ್ಷಕರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು
ಎಆರ್‌ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಗೂ ಎಆರ್‌ಟಿಒ ಮತ್ತು ಅಧೀಕ್ಷಕರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು   

ರಾಣೆಬೆನ್ನೂರು: ಎಆರ್‌ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಗೂ ಎಆರ್‌ಟಿಒ ಮತ್ತು ಅಧೀಕ್ಷಕರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಉಪತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ರವೀಂದ್ರಗೌಡ ಪಾಟೀಲ ಮಾತನಾಡಿ, ಎಆರ್‌ಟಿಒ ಕಚೇರಿ ಅಧೀಕ್ಷಕ ಸೈಯದ್‌ ಮಹ್ಮದ್‌ ಖಾಜಿ ಹಾಗೂ ಎಆರ್‌ಟಿಒ ಪ್ರಲ್ಹಾದ ದೇಸಾಯಿ ಅವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ಕೋವಿಡ್‌-19 ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಾಹನ ನೋಂದಣಿಗೆ ಬಂದ ರೈತರನ್ನು ಮತ್ತು ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ನಗರದಲ್ಲಿ ಎಆರ್‌ಟಿಒ ಕಚೇರಿ ಬಂದಿದೆ. ಆದರೆ ಇಲ್ಲಿನ ಅಧಿಕಾರಿಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಎಂಟು ಹತ್ತು ದಿನಗಳಿಗೊಮ್ಮೆ ಅಧಿಕಾರಿಗಳು ಕಚೇರಿಗೆ ಬರುತ್ತಾರೆ. ಕಚೇರಿ ದಾಖಲಾತಿಗಳು ಅವರ ಚೇಲಾಗಳ ಬಳಿ ಬಿದ್ದಿರುತ್ತವೆ. ಇಲ್ಲಿ ಚೇಲಾಗಳದ್ದೇ ದರ್ಬಾರು, ದುಡ್ಡು ಕೊಟ್ಟರೇ ಮಾತ್ರ ಕೆಲಸ ಮಾಡುತ್ತಾರೆ ಎಂದು ದೂರಿದರು.

ADVERTISEMENT

ಹಿರೇಕೆರೂರು ತಾಲ್ಲೂಕಿನ ಇಂಗಳಗೊಂದಿ ಗ್ರಾಮದ ರೈತ ಏಕಾಂಬರಪ್ಪ ಕೋಣನತಲಿ ಸಿಸಿ ಪಡೆಯಲು ಹೋದಾಗ ಕಚೇರಿಗೆ ಅಲೆದಾಡಿಸಿದ್ದಾರೆ. ರೈತರು ಟ್ರಾಕ್ಟರ್‌, ಬೈಕ್‌ಗಳ ಸಿಸಿ ಪಡೆಯಲು ಹೋದರೆ ಅಧಿಕಾರಿಗಳು ಹಣದ ಆಸೆಗೆ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ಇಂತದ ಅಧಿಕಾರಿಗಳಿಗೆ ಬುದ್ದಿ ಕಲಿಸಬೇಕು. ಅನೇಕ ಪ್ರಕರಣಗಳು ಹಾಗೆ ಉಳಿದಿವೆ. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಮತ್ತು ಮಾನಸಿಕ ಹಿಂಸೆ ನೀಡುವ ಕಚೇರಿ ಅಧೀಕ್ಷಕ ಹಾಗೂ ಎಆರ್‌ಟಿಒ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಮುಂದೆ ಕಚೇರಿಗೆ ಬೀಗ ಜಡಿದು ನ್ಯಾಯಕ್ಕಾಗಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ತಹಶೀಲ್ದಾರ್ ಹಾಗೂ ಪಿಎಸ್‌ಐ ಪ್ರಭು ಕೆಳಗಿಮನಿ ಅವರು ರೈತರೊಂದಿಗೆ ಚರ್ಚಿಸಿ ಎಆರ್‌ಟಿಒ ಕಚೇರಿ ಮೇಲಧಿಕಾರಿಗಳೊಂದಿಗೆ ಬುಧವಾರ ಚರ್ಚಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆ ವಾಪಸ್‌ ಪಡೆದರು. ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ಶೇತಸನದಿ, ಗದಿಗೆಪ್ಪ ಸೂಡಂಬಿ, ಮಲ್ಲಣ್ಣ ನಡುವಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.