ಹಾವೇರಿ: ನಗರದ ಹೊರವಲಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಜನರು ಕಿಕ್ಕಿರಿದು ಸೇರಿದ್ದರು. ಜನರ ಕೇಕೆ–ಶಿಳ್ಳೆಗಳ ಸದ್ದಿನಲ್ಲಿಯೇ ಹೋರಿಗಳು ಕಾಲ್ಕಿತ್ತು ಓಡಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು.
ಹಬ್ಬದ ಹೋರಿಗಳ ಅಭಿಮಾನಿಗಳು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಹಾವೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಹೋರಿಗಳು ಪಾಲ್ಗೊಂಡಿದ್ದವು. ಸ್ಪರ್ಧೆಯ ನಿಗದಿತ ಜಾಗದಲ್ಲಿ ಒಂದೊಂದೇ ಹೋರಿಗಳನ್ನು ಬಿಡಲಾಯಿತು. ಹೋರಿಗಳ ಓಟದ ಜೊತೆಯಲ್ಲಿ, ಹಿಂಬಾಲಕರು ಓಡಿದರು.
ಅಲಂಕಾರಗೊಂಡಿದ್ದ ಪಿ.ಪಿ.ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅವುಗಳ ಗಾಂಭಿರ್ಯದ ಓಟಕ್ಕೆ ಎದುರಿದ್ದ ಜನರು, ಸರಿದು ನಿಂತರು. ಕೆಲವರು ಕೊಬ್ಬರಿ ಹರಿದುಕೊಳ್ಳಲು ಯತ್ನಿಸಿ ವಿಫಲರಾದರು. ಗುರಿ ಮುಟ್ಟಿದ ಹೋರಿಗಳು, ಮತ್ತಷ್ಟು ದೂರಕ್ಕೆ ಓಡಿದವು. ಹಿಂಬಾಲಕರು ಹೋರಿಗಳನ್ನು ಬೆನ್ನಟ್ಟಿ ಹಿಡಿದುಕೊಂಡು ಮೂಲ ಸ್ಥಾನಕ್ಕೆ ಕರೆದೊಯ್ದರು.
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಹೋರಿಗಳಿಗೆ ಬಹುಮಾನ ನಿಗದಿಪಡಿಸಲಾಗಿತ್ತು. ಬೈಕ್, ಬಂಗಾರ, ಫ್ರಿಡ್ಜ್, ಟಿ.ವಿ., ಟ್ರಿಜುರಿ, ದಿವಾನ್ ಹಾಗೂ ಫ್ಯಾನ್‌ಗಳು ಬಹುಮಾನದ ಪಟ್ಟಿಯಲ್ಲಿದ್ದವು.
ಹಲವರಿಗೆ ಗಾಯ: ಸ್ಪರ್ಧೆಯಲ್ಲಿ ಹೋರಿ ಹಿಡಿಯಲು ಹೋಗಿದ್ದ ಕೆಲ ಯುವಕರಿಗೆ ಗಾಯವಾಗಿದ್ದು, ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸ್ಪರ್ಧೆ ನಡೆಯುತ್ತಿದ್ದ ಜಾಗದಲ್ಲಿ ಆಂಬುಲೆನ್ಸ್ ನಿಲ್ಲಿಸಲಾಗಿತ್ತು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.