ADVERTISEMENT

ಗಣೇಶೋತ್ಸವ: ಮಾರ್ಗಸೂಚಿ ಪಾಲನೆ ಕಡ್ಡಾಯ

ಹಬ್ಬದ ಆಚರಣೆ 5 ದಿನಗಳಿಗೆ ಸೀಮಿತ: ಮನರಂಜನಾ ಕಾರ್ಯಕ್ರಮ, ಮೆರವಣಿಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 13:01 IST
Last Updated 6 ಸೆಪ್ಟೆಂಬರ್ 2021, 13:01 IST
ರುದ್ರಕಾಳಿ ಸ್ವರೂಪಿ ಗಣೇಶ (ಸಾಂದರ್ಭಿಕ ಚಿತ್ರ)
ರುದ್ರಕಾಳಿ ಸ್ವರೂಪಿ ಗಣೇಶ (ಸಾಂದರ್ಭಿಕ ಚಿತ್ರ)   

ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಹಬ್ಬದ ಆಚರಣೆ ಕುರಿತಂತೆ ಸಾರ್ವಜನಿಕರು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಪ್ರಕಟಿಸಿದ್ದಾರೆ.

ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ದೇವಸ್ಥಾನದೊಳಗೆ ಹಾಗೂ ತಮ್ಮ ತಮ್ಮ ಮನೆಗಳಲ್ಲಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು.

ಪಾರಂಪರಿಕ ಗಣೇಶೋತ್ಸವಕ್ಕಾಗಿ ಗಣೇಶೋತ್ಸವ ಸಮಿತಿಗಳು ಅಥವಾ ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಒಂದು ನಗರ ಪ್ರದೇಶಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶೋತ್ಸವವನ್ನು ಮಾತ್ರ ಆಚರಿಸಲು ಪ್ರೋತ್ಸಾಹಿಸಬೇಕು. ಗಣೇಶ ಹಬ್ಬದ ಆಚರಣೆ ಗರಿಷ್ಠ 5 ದಿನಗಳಿಗಿಂತ ಹೆಚ್ಚಿನ ದಿನ ಆಚರಿಸುವಂತಿಲ್ಲ.

ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸಬೇಕು. ಹಬ್ಬದ ಆಚರಣೆಯ ಆಯೋಜಕರು ಕೋವಿಡ್-19ರ ನೆಗೆಟಿವ್ ರಿಪೋರ್ಟ್ ಹಾಗೂ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಹೊಂದಿರಬೇಕು.

ಆಯೋಜಿತ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿ ಸಾಂಸ್ಕೃತಿಕ, ಸಂಗೀತ, ನೃತ್ಯ, ಮುಖ್ಯವಾಗಿ ಡಿ.ಜೆ ಯ ಮೂಲಕ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ.

ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಮೆರವಣಿಗೆಯನ್ನು ಹೊರಡಿಸುವಂತಿಲ್ಲ. ಪಾರಂಪರಿಕ ಗಣೇಶ ಮೂರ್ತಿ ಹಾಗೂ ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವುದು, ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸಬೇಕು. ಸರ್ಕಾರಿ ಹಾಗೂ ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಕನಿಷ್ಠ ಜನಸಂಖ್ಯೆಯೊಂದಿಗೆ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ, ಮೊಬೈಲ್ ಟ್ಯಾಂಕ್‍ಗಳಲ್ಲಿ, ಕೃತಕ ವಿಸರ್ಜನಾ ಟ್ಯಾಂಕರ್ಗಳಲ್ಲಿ ವಿಸರ್ಜಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.